Home Shivamogga ಮಾಧ್ಯಮಗಳು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ:ರಾಜಪ್ಪ ದಳವಾಯಿ..!!

ಮಾಧ್ಯಮಗಳು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ:ರಾಜಪ್ಪ ದಳವಾಯಿ..!!

0
3

ಸಾಗರ:ಸಮಾಜದ ಕನ್ನಡಿಯಾಗಬೇಕಾದ ಬಹುತೇಕ ಮಾಧ್ಯಮಗಳು ತಮ್ಮ ನೈತಿಕತೆಯನ್ನು ಕಳೆದುಕೊಂಡು ಮೌನವಾಗಿವೆ. ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸಬೇಕಾದ ಮಾಧ್ಯಮ ಪ್ರಭುತ್ವವು ತೀರಿಕೊಂಡಿರುವ ಈ ಕಾಲಘಟ್ಟದಲ್ಲಿ, ಅನಿವಾರ್ಯವಾಗಿ ಜನಪರ ಚಳವಳಿಗಳೇ ಮಾಧ್ಯಮದ ನೈಜ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿವೆ. ಸತ್ಯ ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತುವ ಮೂಲಕ ಹೋರಾಟಗಳೇ ಇಂದು ಸಮಾಜದ ಜಾಗೃತ ಮಾಧ್ಯಮವಾಗಿ ಕೆಲಸ ಮಾಡುತ್ತಿವೆ ಎಂದು ರಂಗ ಕರ್ಮಿ,ಕರ್ನಾಟಕ ರಾಜ್ಯ ಪುಸ್ತಕ ಖರೀದಿ ಸಮಿತಿ ಅಧ್ಯಕ್ಷ ರಾಜಪ್ಪ ದಳವಾಯಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಅಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿವಿನಲ್ಲಿ ಮಾಧ್ಯಮಕ್ಕೆ ಇರುವ ಸವಾಲು’ ಕುರಿತಾದ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.

ಇಂದಿನ ಆಧುನಿಕ ಸಮಾಜದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಬೇಕಾದ ಮಾಧ್ಯಮ ರಂಗವು, ದುರದೃಷ್ಟವಶಾತ್ ಪ್ರಭುತ್ವದ ಒತ್ತಡಕ್ಕೆ ಮಣಿದು ಕೇವಲ ಮಾಹಿತಿ ಹಂಚುವ ದಲ್ಲಾಳಿಯಾಗಿ ಮಾರ್ಪಡುವ ಆತಂಕಕಾರಿ ಸಂದರ್ಭ ಎದುರಾಗಿದೆ.ನಮ್ಮ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪವಿತ್ರ ಆಶಯದೊಂದಿಗೆ, ಕೇವಲ ಸುದ್ದಿ ನೀಡುವುದಷ್ಟೇ ಅಲ್ಲದೆ ಅದರ ಆಳವಾದ ವಿಶ್ಲೇಷಣೆ ಹಾಗೂ ಸತ್ಪ್ರಜೆಗಳ ವೈಚಾರಿಕ ಜಾಗೃತಿಗೆ ಮಾಧ್ಯಮಗಳು ಹಿಂದೆ ದಾರಿ ದೀಪವಾಗಿದ್ದವು. ಈ ಉದಾತ್ತವಾದ ಮಾಧ್ಯಮ ಧರ್ಮವನ್ನು ಉಳಿಸಿಕೊಳ್ಳಲು ಮತ್ತು ಸತ್ಯದ ಪರವಾಗಿ ಧ್ವನಿ ಎತ್ತಲು ಹಿಂದೆ ನೂರಾರು ಪ್ರಾಮಾಣಿಕ ಪತ್ರಕರ್ತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ.

ವರ್ತಮಾನದಲ್ಲಿ ಪ್ರಜಾಪ್ರಭುತ್ವ ಉಳಿಸಲು ಪ್ರಯತ್ನ ಪಡುವ ಮಾಧ್ಯಮಗಳಿಗೆ ದೊಡ್ಡ ಸವಾಲು ಎದುರಾಗಿದೆ. ಪ್ರಜಾಪ್ರಭುತ್ವ ಎಂದರೆ ಅಭಿಪ್ರಾಯ ರೂಪಿಸುವುದು ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವುದು ಹಕ್ಕು. ಆದರೆ ಪ್ರಭುತ್ವ ಇದನ್ನು ವ್ಯಕ್ತಪಡಿಸದ ಹಾಗೆ ಕಡಿವಾಣ ಹಾಕುತ್ತಿದೆ. ಬಹುತೇಕ ಮಾಧ್ಯಮಗಳು ಆಳುವ ಪ್ರಭುತ್ವದ ತುತ್ತೂರಿಯಂತೆ ವರ್ತನೆ ಮಾಡುತ್ತಿದೆ.ನ್ಯಾಯ ನಿಷ್ಕರ್ಷೆಗೆ ಮುಂದಾಗದೆ ಪ್ರಭುತ್ವದ ಸಂಬಂಧ ಬೆಳೆಸಿಕೊಂಡಿದೆ. ಒಂದು ಕಾಲದಲ್ಲಿ ಮಾಧ್ಯಮದವರು ಸಮಾಜ ವಿಜ್ಞಾನಿಗಳಾಗಿ ಕೆಲಸ ಮಾಡುತ್ತಿದ್ದರು. ಇವರ ಇಂತಹ ಕೆಲಸಗಳಿಂದಾಗಿ ಪ್ರಭುತ್ವ ಬೇಕಾಬಿಟ್ಟಿ ವರ್ತನೆ ಮಾಡುತ್ತಿರಲಿಲ್ಲ. ಹಾಲಿ ಮಾಧ್ಯಮ ಸಂಸ್ಥೆ ಪತ್ರಕರ್ತರಿಗೆ ಸತ್ಯ ವರದಿ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದೆ ಎಂದರು.

ಪ್ರತಿಯೊಬ್ಬನಿಗೂ ಮಾಹಿತಿ ಹಂಚುವ, ಮಾತನಾಡುವ,ಮುದ್ರಿಸುವ ಮತ್ತು ಅಸಮ್ಮತಿ ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ನೀಡಿದೆ.ಇಂತಹ ಹಕ್ಕನ್ನು ಇಂದು ಹಲವು ಪ್ರಕಾರಗಳಲ್ಲಿ ಕಸಿಯಲಾಗುತ್ತಿದೆ.ಪತ್ರಕರ್ತ ಯಂತ್ರದಂತೆ ಕೆಲಸ ಮಾಡುವ ವಾತಾವರಣ ನಿರ್ಮಾಣ ವಾಗಿದೆ ಎಂದರು.ಪ್ರಜಾಪ್ರಭುತ್ವ ಉಳಿಯಬೇಕೇಕು ಎಂದರೆ ಆರೋಗ್ಯಕರ ಮಾಧ್ಯಮ ದ ಅವಶ್ಯಕತೆ ಇದೆ ಎಂದರು.

ಪ್ರತಿಸ್ಪಂದನೆ ನೀಡಿದ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಅಧ್ಯಕ್ಷ ಹೆಚ್ ಬಿ.ರಾಘವೇಂದ್ರ ಮಾತನಾಡಿ ಪ್ರಭುತ್ವ ಬಂಡವಾಳಶಾಹಿ ಒತ್ತಡಕ್ಕೆ ಮಣಿದು ಮಾಧ್ಯಮ ಸಂಸ್ಥೆಗಳನ್ನು ವಿವಿಧ ರೀತಿಯಲ್ಲಿ ಮಣಿಸಲು ಮುಂದಾಗಿದೆ. ಪ್ರಭುತ್ವದ ಅಕ್ರಮಣಕಾರಿ ನೀತಿಯಿಂದಾಗಿ ಮಾಧ್ಯಮಗಳು ಭಯದಿಂದ ಹೇಳಬೇಕಾದನ್ನು ಹೇಳದೆ ಪ್ರಭುತ್ವದ ಅಂಕೆಯಂತೆ ಕುಣಿಯುತ್ತಿದೆ ಎಂದರು. ಇದರಿಂದಾಗಿ ಪ್ರಜಾಪ್ರಭುತ್ವ ಉಳಿಸಲು ಮಾಧ್ಯಮಗಳಿಗೆ ಹತ್ತು ಹಲವು ರೀತಿಯ ಸವಾಲುಗಳಿವೆ. ಇದನ್ನು ದಾಟುವುದು ಇಂದಿನ ತುರ್ತು ಎಂದರು.

ಮುಖ್ಯ ಅತಿಥಿಗಳಾದ ಕಾಕಾಲ್ ಫೌಂಡೇಶನ್ ಸಂಸ್ಥಾಪಕರಾದ ಚಂದ್ರಶೇಖರ ಕಾಕಾಲ್ ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿ ಈ ಮೊದಲು Computers ಗೆ ಸಂಬಂಧಿಸಿದಂತೆ ‘ Garbage in Garbage out’ (GIGO) ಎಂಬ ನಾನ್ನುಡಿ ಚಾಲ್ತಿಯಲ್ಲಿತ್ತು. ಏಕೆಂದರೆ computers ನಾವು ಮಾಡಿರುವ ಪ್ರೋಗ್ರಾಮ್ ಅನ್ನು ಉಪಯೋಗಿಸಿಕೊಂಡು ನಾವು ಏನನ್ನು feed ಮಾಡುತ್ತೇವೆಯೋ ಅದನ್ನು ಪ್ರೋಗ್ರಾಮ್ ಪ್ರಕಾರ ಪ್ರೊಸೆಸ್ ಮಾಡಿ ಹೊರ ಹಾಕುತ್ತಿತ್ತು ಆದರೆ ಈಗ AI (ಕೃತಕ ಬುದ್ದಿ) ಎಷ್ಟು ಶಕ್ತಿಶಾಲಿ ಅಂದರೆ ‘ questions in, Answers out’ ‘doubts in, clarification out’ ಹಾಗೂ ‘data in, analysis out’ ಎಂಬ ರೀತಿಯಲ್ಲಿ ಕೆಲಸ ಮಾಡಬಲ್ಲವು ಎಂದ ಇವರು ಎಐ ವಿಚಾರದಲ್ಲಿ ಕೌಶಲ್ಯ ಮೂಡಿಸಿಕೊಂಡು ನಮ್ಮನ್ನು ನಾವು ಇನ್ವೆಸ್ಟ್ ಮಾಡಿಕೊಂಡರೆ ಯಶಸ್ಸು ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಜಿ.ಸಣ್ಣಹನುಮಪ್ಪ ಮಾತನಾಡಿ ಭಾರತ ಬಾಬರಿ ಮಸೀದಿಯಿಂದ ರಾಮಮಂದಿರದವರಗೆ ಭಿನ್ನ ಚಲನೆ ಪಡೆದುಕೊಂಡಿದೆ. ರಾಜಕಾರಣ ಮತ್ತು ಧರ್ಮ ಪ್ರಶ್ನೆಗಳನ್ನು ಸಹಿಸುವುದಿಲ್ಲ. ಜನ ಸಾಮಾನ್ಯರ ದುಃಖ ದುಮ್ಮಾನವನ್ನು ಆಲಿಸದೆ ಆಡಳಿತದ ಪರವಾದ ಸುದ್ದಿ ಮಾಡುವ ಅನಿವಾರ್ಯತೆ ಮಾಧ್ಯಮಕ್ಕೆ ಬಂದಿದೆ.ಪ್ರಜಾಪ್ರಭುತ್ವದ ಕಾವಲು ನಾಯಿ ಆಗಬೇಕಾದ ಮಾಧ್ಯಮ ಕವಲು ಹಾದಿಯಲ್ಲಿದೆ ಎಂದರು. ಇಂತಹ ಹೊತ್ತಿನಲ್ಲಿ ಸಾಮಾನ್ಯರ ಗೋಳನ್ನು ನ್ಯಾಯಾಲಯ ಕೇಳಬೇಕಿದೆ ಎಂದರು. ಕುಮಾರಿ ಆಶೀತಾ ಸ್ವಾಗತ ಗೀತೆ ಹಾಡಿದರು,ಪ್ರೋ.ಸುರೇಶ್ ಜೆ.ಎಚ್. ಸ್ವಾಗತಿಸಿದರು,ಡಾ.ಎಬಿ ಉಮೇಶ್ ಪ್ರಸ್ತಾವನೆ ಮಾಡಿದರು.ವಸಂತ್ ಕುಗ್ವೆ ಸಂಗಡಿಗರು ಹೋರಾಟದ ಹಾಡು ಹಾಡಿದರು. ಯಶವಂತ್ ವಂದಿಸಿದರು.

ಜಾಹೀರಾತು

NO COMMENTS