✒️..ಅಮಿತ್ ಆರ್ ಆನಂದಪುರ
ಸಾಗರ (ಆನಂದಪುರ): ದೇಶದ ನೈಜ ಅಭಿವೃದ್ಧಿ ಹಾಗೂ ಕ್ರಾಂತಿ ಸಾಧ್ಯವಾಗುವುದು ಶಿಕ್ಷಣ ಕ್ಷೇತ್ರದಿಂದ ಮಾತ್ರ. ಇಂದಿನ ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿಕೊಂಡು ಮುನ್ನಡೆಯಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಆನಂದಪುರ ಸಮೀಪದ ಯಡೇಹಳ್ಳಿಯ ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಹೇರಳ ಅವಕಾಶಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿಯ ಕನಸನ್ನು ನನಸು ಮಾಡುವ ಜೊತೆಗೆ ದೇಶಕ್ಕೆ ಮಾದರಿ ನಾಯಕರಾಗಬೇಕು ಎಂದು ಆಶಿಸಿದರು.

ಸಾಗರ ತಾಲ್ಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದ್ದು,ಜೂನಿಯರ್ ಕಾಲೇಜು ಹಾಗೂ ಮಹಿಳಾ ಕಾಲೇಜುಗಳು ರಾಜ್ಯದಲ್ಲೇ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿವೆ. ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ಅನುದಾನ ಹಾಗೂ ಅಗತ್ಯ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಫಣಿಯಮ್ಮ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಕವನ ರಚನೆ, ಸಂಗೀತ, ಜಾನಪದ ಕಲೆ ಹಾಗೂ ಸಾಹಿತ್ಯಿಕ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಆರ್. ಸುರೇಶ್, ಗಾಯಕ ನಾಗರಾಜ್ ತೋಂಬ್ರಿ, ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಧನಂಜಯ್ ಉಪಸ್ಥಿತರಿದ್ದರು.



