Home Shivamogga ಅರಣ್ಯದೊಳಗೆ ಮಕ್ಕಳ ಹೆಜ್ಜೆ; ಚಿಣ್ಣರ ವನ ದರ್ಶನ..!!

ಅರಣ್ಯದೊಳಗೆ ಮಕ್ಕಳ ಹೆಜ್ಜೆ; ಚಿಣ್ಣರ ವನ ದರ್ಶನ..!!

0
4

ಹೊಸನಗರ: ಮಕ್ಕಳಲ್ಲಿ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಆಯೋಜಿಸಿರುವ ‘ಚಿಣ್ಣರ ವನ ದರ್ಶನ’ ಎರಡು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಲಾಯಿತು.

ಸಾಗರ ವಿಭಾಗದ ನಗರ ಅರಣ್ಯ ವಲಯದ ವತಿಯಿಂದ ಸೋನಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮುಧಾಸಿರ್ ಅಹಮದ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಬಸವರಾಜ್ ಜಿಗಳಿಕೊಪ್ಪ ಪ್ರವಾಸಕ್ಕೆ ಚಾಲನೆ ನೀಡಿದರು.

ಅರಣ್ಯವನ್ನು ಕೇವಲ ಪುಸ್ತಕಗಳಲ್ಲಿ ಓದುವುದಕ್ಕಿಂತ ನೇರವಾಗಿ ವೀಕ್ಷಿಸಿ, ಅನುಭವಿಸುವ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಹಾಗೂ ಸಂರಕ್ಷಣೆಯ ಮನೋಭಾವ ಬೆಳೆಸುವುದು ‘ಚಿಣ್ಣರ ವನ ದರ್ಶನ’ದ ಪ್ರಮುಖ ಉದ್ದೇಶವಾಗಿದೆ. ಅರಣ್ಯ, ವನ್ಯಜೀವಿ, ಸಸ್ಯ ವೈವಿಧ್ಯತೆ ಹಾಗೂ ಪರಿಸರ ವ್ಯವಸ್ಥೆಯ ಮಹತ್ವವನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿ ಬೆಳೆಸುವ ಆಶಯ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮುಧಾಸಿರ್ ಅಹಮದ್ ತಿಳಿಸಿದರು.

ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ ಪರಿಸರ ವ್ಯವಸ್ಥೆ, ವಿವಿಧ ಸಸ್ಯ ಪ್ರಭೇದಗಳು, ವನ್ಯಜೀವಿಗಳು, ಜೈವಿಕ ವೈವಿಧ್ಯತೆ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ನೇರ ಅನುಭವದ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಉಪ ವಲಯ ಅರಣ್ಯಾಧಿಕಾರಿ ಬಸವರಾಜ್ ಜಿಗಳಿಕೊಪ್ಪ ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ವಿನಾಯಕ ನಾವಡ, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS