ಶಿವಮೊಗ್ಗ: ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಗ್ರಾಮ ಸಹಾಯಕನನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಸಿದ್ದಲಿಂಗ ರೆಡ್ಡಿ ಹಾಗೂ ಹೊಳಲೂರು ನಾಡಕಚೇರಿಯ ಗ್ರಾಮ ಸಹಾಯಕ ರಾಜೇಶ್ ಬಂಧಿತರಾಗಿದ್ದಾರೆ. ಕಾರು ಚಾಲಕ ಕೇಶವಮೂರ್ತಿ ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ.
ದೂರುದಾರ ಕೇಶವಮೂರ್ತಿ ಅವರು ಭೂಸ್ವಾಧೀನಾಧಿಕಾರಿ ಕಚೇರಿಗೆ ತಮ್ಮ ಕಾರನ್ನು ಬಾಡಿಗೆಗೆ ನೀಡಿದ್ದರು. ಕಳೆದ ಕೆಲವು ತಿಂಗಳ ಕಾರಿನ ಮಾಸಿಕ ಬಾಡಿಗೆ ಬಿಲ್ ಮಂಜೂರು ಮಾಡಲು ಸಿದ್ದಲಿಂಗ ರೆಡ್ಡಿ ಅವರು ₹40,000 ಲಂಚದ ಬೇಡಿಕೆ ಇಟ್ಟಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿದ್ದಲಿಂಗ ರೆಡ್ಡಿ ಸೂಚನೆಯಂತೆ ಹಣ ಸ್ವೀಕರಿಸಲು ಗ್ರಾಮ ಸಹಾಯಕ ರಾಜೇಶ್ ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಸಮೀಪ ಬಂದ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಲೆಗೆ ಬಿದ್ದರು. ನಂತರ ಸಿದ್ದಲಿಂಗ ರೆಡ್ಡಿಯನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
✒️…ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









