
✒️..ಅಮಿತ್ ಆರ್ ಆನಂದಪುರ
ಸಾಗರ ತಾಲ್ಲೂಕಿನ ಶೆಡ್ತಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಮಾರ್ಚ್ 12ರಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆ ಶಾಲೆಯಲ್ಲಿ ಸಹಶಿಕ್ಷಕರಾದ ಮೂರ್ತಿ ಬಿ, ಪ್ರಮೋದ್ ಸಣ್ಣಕ್ಕಿ ಹಾಗೂ ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಅವರು ಸುಶ್ರುತ ಎಂಬ ವಿದ್ಯಾರ್ಥಿಯನ್ನು ತರಗತಿಯಲ್ಲಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವೇಳೆ ಬಾಲಕನ ದೇಹದ ಮೇಲೆ ಬಾಸುಂಡೆಗಳು ಉಂಟಾಗಿದ್ದು, ಕೈ ಬೆರಳುಗಳಿಗೆ ಗಾಯವಾಗಿ ರಕ್ತ ಬಂದಿರುವುದಾಗಿ ತಿಳಿದುಬಂದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಬಳಿಕ ವೈದ್ಯರ ಬಳಿ ಕರೆದೊಯ್ಯಲಾಗಿದ್ದು, ಹೆಚ್ಚಿನ ಪೆಟ್ಟುಗಳಿರುವುದರಿಂದ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಬಾಲಕನ ತಂದೆ ಕೃಷ್ಣಮೂರ್ತಿ ಹಾಗೂ ತಾಯಿ ಶೈಲಜಾ ಅವರು ತಮ್ಮ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಈ ಕುರಿತು ನಮ್ಮ ಅಮಿತ್ ಟೈಮ್ಸ್ ಗೆ ನ್ಯೂಸ್ ಚಾನೆಲ್ ಗೆ ಪ್ರತಿಕ್ರಿಯಿಸಿ ಸಾಗರದ ಬಿಇಓ ಸದಾನಂದ ಸ್ವಾಮಿ ಮಾತನಾಡಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ತಪ್ಪು. ಈ ಸಂಬಂಧ ಜಿಲ್ಲಾ ಉಪ ನಿರ್ದೇಶಕರಿಗೆ ವರದಿ ನೀಡಿದ್ದೇವೆ. ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t











