Home Shivamogga Sagara ಎಸ್‌ಎಸ್‌ಎಲ್‌ಸಿ ರಾಜ್ಯ ರ್ಯಾಂಕ್ ವಿಜೇತರಿಗೆ ₹50 ಸಾವಿರ ಪ್ರೋತ್ಸಾಹಧನ: ಪ್ರಕಾಶ್ ರುಕ್ಮಯ್ಯ ಘೋಷಣೆ..!!

ಎಸ್‌ಎಸ್‌ಎಲ್‌ಸಿ ರಾಜ್ಯ ರ್ಯಾಂಕ್ ವಿಜೇತರಿಗೆ ₹50 ಸಾವಿರ ಪ್ರೋತ್ಸಾಹಧನ: ಪ್ರಕಾಶ್ ರುಕ್ಮಯ್ಯ ಘೋಷಣೆ..!!

49
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್‌ ಗಳಲ್ಲಿ ಯಾವುದಾದರೂ ಒಂದು ಗಳಿಸಿದರೆ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರು ರೇಕ್ಯೂ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ಘೋಷಿಸಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಯೋಗದಿಂದ ಸುಮಾರು ₹12 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ಶೌಚಾಲಯ ಮತ್ತು ನವೀಕರಣಗೊಂಡ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಪ್ರೋತ್ಸಾಹದ ದೃಷ್ಟಿಯಿಂದ ಈ ವರ್ಷ ಕೈಗೊಂಡಿರುವ ಕಾರ್ಯಕ್ರಮಗಳಂತೆ ಮುಂದಿನ ವರ್ಷವೂ 8, 9 ಹಾಗೂ 10ನೇ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದೆಹಲಿಗೆ ವಿಮಾನ ಪ್ರಯಾಣ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪ್ರದರ್ಶನ ಆಯೋಜಿಸಲಾಗುವುದು. ಅಲ್ಲದೆ, ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದಾಗಿ ಈ ವರ್ಷ ‘ಕೆಪಿಎಸ್ ಜಾತ್ರೆ’ ಆಚರಿಸಲು ಸಜ್ಜಾಗಿದ್ದೇವೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಬೆಳೆಸಿದರೆ ಯಶಸ್ಸು ಖಚಿತ. ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರುಗಳಿಗೆ ನೋವಾಗದಂತೆ ನಡೆದುಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಬಳಿಕ ತಾವು ಓದಿದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ, ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿ ಶಾಲೆ ತೊರೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಹೆಸರಿನಲ್ಲಿ ಒಂದು ಗಿಡ ನೆಟ್ಟು ಹೋಗುವ ಸಂಪ್ರದಾಯ ಆರಂಭಿಸಲಾಗುವುದು. ಆ ಗಿಡ ವಿದ್ಯಾರ್ಥಿಗಳ ನೆನಪಿನ ಸಂಕೇತವಾಗಿ ಶಾಲೆಯಲ್ಲಿ ಉಳಿಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ರವಿಶಂಕರ್, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ.ಈ ಶೌಚಾಲಯವನ್ನು ಸ್ವಚ್ಛವಾಗಿ ಬಳಸಿಕೊಂಡು ಅದರ ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ” ಎಂದು ಹೇಳಿದರು. ಈಗಾಗಲೇ ಪ್ರಕಾಶ್ ರುಕ್ಮಯ್ಯ ಅವರು ಶಾಲೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಶಾಲೆಯ ಅಭಿವೃದ್ಧಿಗೆ ಅವರ ಸಹಕಾರ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಈಶ್ವರಪ್ಪ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ,
ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಉಮೇಶ್, ರಂಗನಾಥ್, ಗಜೇಂದ್ರ ಯಾದವ್,ಜಗದೀಶ,ಚಂದ್ರಶೇಖರ್, ಜಗನ್ನಾಥ್, ಬಿ.ಡಿ ರವಿಕುಮಾರ್, ಪ್ರಿಯಾ ಕೃಷ್ಣ, ಮಮತಾ, ಶೃತಿ, ಪ್ರಾಣೇಶ್ ಆಚಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು: