ಸಾಗರ: ನಾಡಪ್ರಭು ಕೆಂಪೇಗೌಡರ ಆದರ್ಶಗಳು ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ಆಡಳಿತ, ಅಭಿವೃದ್ಧಿ ದೃಷ್ಟಿಕೋನ ಹಾಗೂ ಜನಪರ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಡಿ. ರವಿಕುಮಾರ್ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಸಾಗರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕೆಂಪೇಗೌಡರ ದೂರದೃಷ್ಟಿಯ ನಾಯಕತ್ವ, ಆಡಳಿತ ವೈಖರಿ ಹಾಗೂ ಬೆಂಗಳೂರು ನಗರ ನಿರ್ಮಾಣಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲೇಬೇಕು. ಬೆಂಗಳೂರಿನ ಪ್ರತಿಯೊಂದು ಗಲ್ಲಿಯ ಇತಿಹಾಸದಲ್ಲೂ ಕೆಂಪೇಗೌಡರ ಹೆಸರಿದ್ದು, ಇಂದು ಜಾಗತಿಕ ಆರ್ಥಿಕ ಕೇಂದ್ರವಾಗಿ ಬೆಳೆದಿರುವ ಬೆಂಗಳೂರು ಅವರ ದೂರದೃಷ್ಟಿಯ ಫಲವಾಗಿದೆ. ವ್ಯಾಪಾರ, ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿ ಅಡಿಪಾಯ ಹಾಕಿದ ಈ ಮಹಾನಗರಿ ಇಂದು ವಿಶ್ವದ ವಿವಿಧ ಭಾಗಗಳಿಂದ ಬಂದ ಪ್ರತಿಭೆಗಳಿಗೆ ಆಸರೆಯಾಗಿರುವುದು ಕೆಂಪೇಗೌಡರ ಅಪ್ರತಿಮ ಆಡಳಿತ ಕೌಶಲ್ಯದ ಪ್ರತೀಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪತಹಸೀಲ್ದಾರ್ ರೇಖಾ ಮಾತನಾಡಿ, ಕೆಂಪೇಗೌಡರ 517ನೇ ಜಯಂತಿ ಪವಿತ್ರ ದಿನವಾಗಿದ್ದು, ಅವರ ಆದರ್ಶ ತತ್ವಗಳು ಹಾಗೂ ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಒಕ್ಕಲಿಗ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ. ಬಸವರಾಜ್ ಮಾತನಾಡಿ, ಸರ್ಕಾರದ ಸೂಚನೆ ಇದ್ದರೂ ಕೆಲ ಅಧಿಕಾರಿಗಳು ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು ವಿಷಾದನೀಯ. ಕಾಟಾಚಾರಕ್ಕಾಗಿ ಜಯಂತಿಗಳನ್ನು ಆಚರಿಸದೆ, ಮಹನೀಯರ ಆದರ್ಶಗಳನ್ನು ಪಾಲಿಸಬೇಕು. ಕೆಂಪೇಗೌಡರು ಮಾಡಿದ ಅಭಿವೃದ್ಧಿ ಕಾರ್ಯಗಳು ಭೂಮಿ ಇರುವವರೆಗೂ ಶಾಶ್ವತವಾಗಿ ಉಳಿಯಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗ ಸಮಾಜದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ರಮೇಶ್, ಸಮಾಜದ ಮುಖಂಡ ಶೇಷಗಿರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾಹೀರಾತು:












