Home Shivamogga Sagara ಭೂಮಾಫಿಯಾದವರು ಶಾಸಕರ ಎಡಗೈ-ಬಲಗೈ; 90% ಮಾಹಿತಿ ನಮ್ಮ ಬಳಿ ಇದೆ: ರತ್ನಾಕರ ಹೊನಗೋಡು ಆರೋಪ..!!

ಭೂಮಾಫಿಯಾದವರು ಶಾಸಕರ ಎಡಗೈ-ಬಲಗೈ; 90% ಮಾಹಿತಿ ನಮ್ಮ ಬಳಿ ಇದೆ: ರತ್ನಾಕರ ಹೊನಗೋಡು ಆರೋಪ..!!

109
0

✒️..ಅಮಿತ್ ಆರ್ ಆನಂದಪುರ

ಆನಂದಪುರ (ಸಾಗರ) :ಗ್ರಾಮದ ಗ್ರಾಮಠಾಣಾ ಜಾಗವನ್ನು ಕಬಳಿಸಲು ಬಂದಿರುವ ಭೂಮಾಫಿಯಾದವರು ಶಾಸಕರ ಎಡಗೈ ಮತ್ತು ಬಲಗೈಗಳಾಗಿದ್ದಾರೆ ಎಂಬ ಬಗ್ಗೆ ನಮಗೆ 90% ಮಾಹಿತಿ ಲಭ್ಯವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಆರೋಪಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 148ರಲ್ಲಿ 11.17 ಗುಂಟೆ ಗ್ರಾಮಠಾಣಾ ಜಾಗ ಇದೆ. ಈ ಜಾಗದಲ್ಲಿ ಟೀಕಪ್ಪ ಗೌಡರು ಹಾಗೂ ಇನ್ನಿತರರು ಸ್ವಲ್ಪ ಪ್ರಮಾಣದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಲಿಂಗಾಯತ ಸಮುದಾಯದ ಸ್ಮಶಾನವೂ ಸ್ವಲ್ಪ ಪ್ರಮಾಣದಲ್ಲಿದೆ. ಇದರ ಹೊರತಾಗಿ ಸುಮಾರು 7 ರಿಂದ 8 ಎಕರೆ ಗ್ರಾಮಠಾಣಾ ಜಾಗ ಖಾಲಿಯಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕೆಂದು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಈ ಹಿಂದೆ ತೀರ್ಮಾನಿಸಿದ್ದರು ಎಂದು ತಿಳಿಸಿದರು.

ಆದರೆ, ಪ್ರಸ್ತುತ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದನ್ನು ಅವಕಾಶವನ್ನಾಗಿ ಮಾಡಿಕೊಂಡ ಭೂಮಾಫಿಯಾದವರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಸುಮಾರು ₹25 ರಿಂದ ₹30 ಕೋಟಿ ಮೌಲ್ಯದ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಅದರ ಭಾಗವಾಗಿ ರಾತ್ರಿ ವೇಳೆ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಆರೋಪಿಸಿದರು.

ಇದರ ವಿರುದ್ಧ ಗ್ರಾಮಸ್ಥರು ಹಾಗೂ ನಾವು ಧ್ವನಿ ಎತ್ತಿದ ನಂತರ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಟೀಕಪ್ಪ ಗೌಡರ ಧರ್ಮಪತ್ನಿ ಹಾಗೂ ಮಗಳ ಮೂಲಕ ಹೇಳಿಕೆಗಳನ್ನು ಕೊಡಿಸಲಾಗಿದೆ. ಅವಸರದಲ್ಲಿ ಹೆಣ್ಣು ಮಕ್ಕಳಿಗೆ ಹೋಂ ವರ್ಕ್ ಸರಿಯಾಗಿ ಮಾಡಿಸದೆ ಪತ್ರಿಕೆಗಳಲ್ಲಿ ಸ್ಟೇಟ್ಮೆಂಟ್ ಕೊಡಿಸಿದ್ದಾರೆ ಭೂ ಮಾಫಿಯಾದವರು ಎಂದು ಕಿಡಿಕಾರಿದರು.

ನಾನು ಕಳೆದ 40 ವರ್ಷಗಳಿಂದ ಆ ಜಾಗವನ್ನು ನೋಡಿಕೊಂಡು ಬಂದಿದ್ದೇನೆ. ಟೀಕಪ್ಪ ಗೌಡರು ತಮ್ಮ ಮನೆಯ ಸಮೀಪ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಉಳಿದ ಜಾಗದಲ್ಲಿ ಯಾರೂ ಸಾಗುವಳಿ ಮಾಡಿಕೊಂಡಿರಲಿಲ್ಲ. ಅಮಾಯಕ ಮಹಿಳೆಯರ ವಿಚಾರಕ್ಕೆ ನಾವು ಅಥವಾ ಗ್ರಾಮ ಪಂಚಾಯಿತಿಯವರು ಹೋಗಿಲ್ಲ. ಆದರೆ, ನಿಜಾಂಶವನ್ನು ಮರೆಮಾಚಲು ಭೂಮಾಫಿಯಾದವರು ಅವರಿಂದ ಹೇಳಿಕೆಗಳನ್ನು ಕೊಡಿಸಿದ್ದಾರೆ ಎಂದು ಆರೋಪಿಸಿದರು.

ಭೂಮಾಫಿಯಾದವರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಆ ಮಹಿಳೆಯರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಅವರನ್ನು ಕರೆಸಿ, ಯಾರ್ಯಾರು ಫೋನ್ ಮಾಡಿದ್ದಾರೆ ಎಂಬ ಕರೆ ವಿವರಗಳನ್ನು ಪರಿಶೀಲಿಸಿದರೆ, ಭೂಮಾಫಿಯಾಗೆ ಸಹಕರಿಸಿದವರು ಹಾಗೂ ಸಂಬಂಧಿತ ಅಧಿಕಾರಿಗಳ ಪಾತ್ರವೂ ಬಹಿರಂಗವಾಗುತ್ತದೆ ಎಂದು ಹೇಳಿದರು.

ಇಷ್ಟೆಲ್ಲಾ ಬೆಳವಣಿಗೆಗಳಾದರೂ ಶಾಸಕರು ಮೌನವಾಗಿರುವುದನ್ನು ನೋಡಿದರೆ, ಸಾರ್ವಜನಿಕ ವಲಯದಲ್ಲಿ ಅವರಿಗೆ ಸಹ ಈ ಪ್ರಕರಣದಲ್ಲಿ ಬೆಂಬಲವಿದೆ ಎಂಬ ಅನುಮಾನ ಮೂಡುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಶಾಸಕರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ತಾಲೂಕು ಪಂಚಾಯಿತಿ ಇಒ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಜಾಗವನ್ನು ಕಾಯ್ದಿರಿಸಿದ ಗ್ರಾಮಠಾಣಾ ಜಾಗ ಎಂದು ಸೂಚನಾ ಫಲಕ ಅಳವಡಿಸಬೇಕು. ಇದಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದರೆ, ಅವರ ವಿರುದ್ಧವೂ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳು ಇದರ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿ ಇದರ ಹಿಂದಿರುವವರನ್ನು ಪತ್ತೆ ಹಚ್ಚಬೇಕು ಆಗಲಿಲ್ಲವೆಂದರೆ ಅದನ್ನು ನಾವು ಪತ್ತೆ ಹಚ್ಚಿ ಕೊಡುತ್ತೇವೆ ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್ ಮಾತನಾಡಿ, ಆನಂದಪುರ ಭಾಗದಲ್ಲಿ ಅನೇಕರು ನಿವೇಶನ ರಹಿತ ಬಡವರು ಇದ್ದಾರೆ. ಅವರಿಗೆ ಗ್ರಾಮಠಾಣಾ ಜಾಗವನ್ನು ಸರ್ವೆ ನಡೆಸಿ ನಿವೇಶನ ಕೊಡುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೆವು. ಅಷ್ಟರಲ್ಲಿ ನಮ್ಮ ಅಧಿಕಾರದ ಅವಧಿ ಮುಗಿದು ಹೋಯಿತು.

ಆದರೆ, ಆ ಜಾಗವನ್ನು ನಾಲ್ಕು ಭಾಗಗಳನ್ನಾಗಿ ಅಕ್ರಮವಾಗಿ ಮಾಡಿ ನಿವೇಶನ ಜಾಗದಂತೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವೆಲ್ಲ ವಿರೋಧಿಸಿದ್ದೇವೆ. ಆದರೆ, ಯಾರು ಅಂತ ಹೆಸರು ಹೇಳಲಿಲ್ಲ. “ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದ್ದಾರೆ. ನಾವಲ್ಲ ,ನಾವಲ್ಲ, ಈ ಮಾತುಗಳು ಬೇಡ. ಇದಕ್ಕೆಲ್ಲ ನಾವು ಹೆದರುವವರು ಅಲ್ಲ. ಸಾರ್ವಜನಿಕರ ಆಸ್ತಿ ಸಾರ್ವಜನಿಕರಿಗೆ ಸಿಗಬೇಕು. ಇದರ ವಿರುದ್ಧವಾಗಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಚುನಾಯಿತ ಪ್ರತಿನಿಧಿಗಳಾದ ಮೋಹನ್ , ಚೌಡಪ್ಪ, ರೂಪಲತಾ, ನವೀನ ರವೀಂದ್ರ,ಲಲಿತಮ್ಮ, ಹಾಗೂ ಪ್ರಮುಖರಾದ ರವೀಂದ್ರ ಗೌಡ್ರು, ಶೇಖರಪ್ಪ, ಸುಬ್ರಮಣ್ಯ, ನಾಗರಾಜ್ , ಗಾಯತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಾಹೀರಾತು