✒️..ಅಮಿತ್ ಆರ್ ಆನಂದಪುರ
(ಆನಂದಪುರ)ಸಾಗರ: ಸಾಗರ ಈಡಿಗ ಸಂಘದಲ್ಲಿ ಕೆಲವರು ಹೆಂಡ ಮಾರುವವರು, ಭೂಮಾಫಿಯಾದವರು ಸೇರಿಕೊಂಡು ಶಾಸಕರನ್ನು ದಾರಿ ತಪ್ಪಿಸಿ ಸಂಘದ ಅಧ್ಯಕ್ಷರನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಆರೋಪಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಈಡಿಗ ಸಮಾಜದ ಸಂಘವನ್ನು ಕಾಗೋಡು ತಿಮ್ಮಪ್ಪ, ಅಣ್ಣಾಜಿ, ಹಾಲಪ್ಪ ಹಾಗೂ ರಾಮಪ್ಪ ಅವರಂತಹ ಹಿರಿಯರು ರಾಜಕಾರಣವನ್ನು ಸಂಘದಿಂದ ದೂರವಿಟ್ಟು ಸಮಾಜದ ಅಭಿವೃದ್ಧಿಗಾಗಿ ಕಟ್ಟಿಬೆಳೆಸಿದ್ದಾರೆ. ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಘವನ್ನು ಬೆಳೆಸಿದ ಹಿರಿಯರ ಆದರ್ಶವನ್ನು ಈಗ ಕೆಲವರು ಮರೆತಿದ್ದಾರೆ ಎಂದು ಹೇಳಿದರು.
ಮಂತ್ರಿಗಿರಿ ಲಾಭಕ್ಕಾಗಿ ಈಡಿಗ ಸಂಘದ ಅಧ್ಯಕ್ಷ ಮರಸದ ಮಂಜಪ್ಪ ಅವರು ಸಮಾಜದ ಪ್ರಮುಖರೂ ಆಗಿರುವ ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರನ್ನು ಅಭಿನಂದಿಸಲು ತೆರಳುವ ವೇಳೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲು ಒತ್ತಾಯಿಸಲಾಗಿತ್ತು. ಆದರೆ, ಒಬ್ಬ ಶಾಸಕರ ಪರವಾಗಿ ನಾವು ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ ಅಧ್ಯಕ್ಷರನ್ನು ಕೆಳಗಿಳಿಸುವ ಹುನ್ನಾರ ಆರಂಭವಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈಡಿಗ ಸಮಾಜದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಇದ್ದಾರೆ. ಕಾಗೋಡು ತಿಮ್ಮಪ್ಪ, ಹಾಲಪ್ಪ ಅವರಂತಹ ನಾಯಕರು ಸಂಘದಲ್ಲಿದ್ದು ಹೋಗಿದ್ದಾರೆ. ಆದರೆ ಅವರು ಯಾರೂ ಸಂಘದೊಳಗೆ ರಾಜಕಾರಣವನ್ನು ತರಲಿಲ್ಲ. ಈಗಿನ ಶಾಸಕರು ಮಾತ್ರ ಸಂಘದೊಳಗೆ ರಾಜಕೀಯ ಮಾಡಿ ಸಮಾಜದ ಸಂಘಟನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಈಡಿಗ ಸಮಾಜದ ಸ್ವಾಮೀಜಿಯವರ ನಡೆ ಕುರಿತು ನಾವು ಹೇಳಿಕೆ ನೀಡಿದ್ದಾಗ, ಶಾಸಕರ ಎಡಗೈ-ಬಲಗೈ ಎಂದು ಗುರುತಿಸಿಕೊಳ್ಳುವವರ ಮೂಲಕ ಸಾಗರದಲ್ಲಿ ಹೇಳಿಕೆ ನೀಡಿಸಲಾಗುತ್ತಿದೆ. ನಾನು ಮಧು ಬಂಗಾರಪ್ಪ ಹಾಗೂ ಭೀಮಣ್ಣ ಅವರನ್ನು ಓಲೈಸುವ ರಾಜಕಾರಣ ಮಾಡಿಲ್ಲ ಅದು ನನಗೆ ಅವಶ್ಯಕತೆಯೂ ಇಲ್ಲ. ಜನ ನನ್ನನ್ನು ರಾಜಕಾರಣಕ್ಕೆ ತಂದಿದ್ದು ಅವರ ಸೇವೆ ಮಾಡಲು. ನಾನು ಯಾವುದೇ ಬ್ಲಾಕ್‌ಮೇಲ್ ದಂಧೆ, ಮರಳು ಮಾಫಿಯಾ, ಭೂ ಮಾಫಿಯಾ ಅಥವಾ ಗಣಿಗಾರಿಕೆ ದಂಧೆ ಮಾಡಿಲ್ಲ. ನಿಸ್ವಾರ್ಥವಾಗಿ ಕೃಷಿ ಮಾಡಿಕೊಂಡು ಜನರ ಸೇವೆ ಮಾಡುತ್ತಿದ್ದೇನೆ. ಬೇಕಾದರೆ ನಾನು ಮಾಡುತ್ತಿರುವ ಕೃಷಿ ಚಟುವಟಿಕೆಗಳನ್ನು ಬಂದು ನೋಡಿ ಎಂದು ಶಾಸಕರಿಗೆ ಹಾಗೂ ಅವರ ಆಪ್ತರಿಗೆ ಸವಾಲು ಹಾಕಿದರು.
ತಾಲೂಕು ಪಂಚಾಯತ್ ಸದಸ್ಯನಾಗಿದ್ದಾಗ ಹಾಲಪ್ಪ ಅವರನ್ನು ಓಲೈಸಿ ಯಾರಿಗೆ ಮತ ಹಾಕಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಅಂತಹ ಓಲೈಕೆ ರಾಜಕಾರಣ ಮಾಡುತ್ತಿರುವುದು ನೀವಲ್ಲವೇ ಇದು ಪ್ರಶ್ನಿಸಿದರು. ಶಾಸಕರು ಅಂತಹವರಿಂದ ಹೇಳಿಕೆ ನೀಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಇತ್ತೀಚೆಗೆ ಮಾತ್ರ ಸಾಗರ ಈಡಿಗ ಸಂಘದ ಸದಸ್ಯರಾಗಿದ್ದಾರೆ. ಆದರೂ ಸಂಘದೊಳಗೆ ರಾಜಕಾರಣ ಮಾಡಲು ಮುಂದಾಗಿರುವುದು ಬೇಸರದ ಸಂಗತಿ. ಸಂಘದಲ್ಲಿರುವ ಕೆಲವರು, ಹೆಂಡ ಮಾರುವವರು ಹಾಗೂ ಭೂ ಮಾಫಿಯಾದವರು ಸೇರಿಕೊಂಡು ಶಾಸಕರನ್ನು ದಾರಿ ತಪ್ಪಿಸಿ ಅಧ್ಯಕ್ಷರನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ ಎಂದು ರತ್ನಾಕರ ಆರೋಪಿಸಿದರು.
ಧನರಾಜ್ ಬೈರಾಪುರ ಮಾತನಾಡಿ ಶಾಸಕರ ನಡೆ ಸಮಾಜವನ್ನು ದಾರಿ ತಪ್ಪಿಸುವಂತಿದ್ದು, ಈಡಿಗ ಸಮಾಜದಲ್ಲಿ ಅನಗತ್ಯ ಗೊಂದಲ ಮತ್ತು ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿರುವುದು ಬೇಸರದ ಸಂಗತಿ. ಸಮಾಜದ ಸಂಘಟನೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇಂತಹ ನಡೆಗೆ ನಾವು ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯಣ್ಣಪ್ಪ ಸಂಗಣ್ಣನಕೆರೆ, ಪ್ರಶಾಂತ್ ಗೌತಮಪುರ, ಚಂದ್ರು ಐಗಿನ ಬೈಲು, ಮಂಜಪ್ಪ , ಮೋಹನ್, ಪರಮೇಶಿ ಕಣ್ಣೂರು ಉಪಸ್ಥಿತರಿದ್ದರು.
ಜಾಹೀರಾತು












