✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, ಆ.4: ಎರಡು ದಶಕಗಳ ಬಳಿಕ ಒಂದಾದ ಸರ್ಕಾರಿ ಪಾಲಿಟೆಕ್ನಿಕ್ ಸೊರಬದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಭಾವಪೂರ್ಣವಾಗಿ ಗುರುವಂದನೆ ಸಲ್ಲಿಸಿ, ಸ್ನೇಹ ಸಮ್ಮೇಳನದ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಪಟ್ಟಣದ ಜುವೆಲ್ ರಾಕ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಭದ್ರಾವತಿ ಸರ್ಕಾರಿ ಪಾಲಿಟೆಕ್ನಿಕ್ನ ನಿವೃತ್ತ ಉಪನ್ಯಾಸಕ ಗುರುಮೂರ್ತಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದರೂ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಇಂದು ಸಾರ್ಥಕವಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಇಂಜಿನಿಯರ್ಗಳಾಗಿ ಸೇವೆ ಸಲ್ಲಿಸುತ್ತಿರುವುದು ಶಿಕ್ಷಕನಾಗಿ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಂಶುಪಾಲ ವಾಸುದೇವ್ ಅಪ್ಪಾಜಿ ಗೋಳ್, ಗುಣಮಟ್ಟದ ಶಿಕ್ಷಣವೇ ಸದೃಢ ರಾಷ್ಟ್ರ ನಿರ್ಮಾಣದ ಅಡಿಪಾಯವಾಗಿದ್ದು, ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.
ದಾವಣಗೆರೆಯ ಡಿಆರ್ಆರ್ ಪಾಲಿಟೆಕ್ನಿಕ್ ಉಪನ್ಯಾಸಕ ಜಾವಿದ್ ಇಕ್ಬಾಲ್, 20 ವರ್ಷಗಳ ಬಳಿಕ ವಿದ್ಯಾರ್ಥಿಗಳು ಒಂದಾಗಿ ಗುರುಗಳನ್ನು ಗೌರವಿಸಿರುವುದು ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯದ ಅಪರೂಪದ ಕ್ಷಣವಾಗಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕತೆ ಮತ್ತು ನೈತಿಕತೆಗೆ ಬದ್ಧರಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಪಾಲಿಟೆಕ್ನಿಕ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಹಾಗೂ ಕುಲಸಚಿವೆ ನಾಗರತ್ನಮ್ಮ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಬಳಿಕ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಯಶೋಧರ ಸ್ವಾಗತಿಸಿದರು. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ನವೀನ್ ಕುಮಾರ್ ಎಂ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕುಮಾರ್ ಸಿ.ಪಿ., ಸಂತೋಷ್ ಕರಡಿಗೇರಿ, ಶುಭಕರ, ರವಿ, ಮಧು ನಾಯಕ್, ಸಂತೋಷ್ ಕುಮಾರ್ ಎಸ್.ಎನ್. ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಜಾಹೀರಾತು












