ಸಾಗರ: ಸೊಂಟ ನೋವು ತಾಳಲಾರದೆ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶೋಚನೀಯ ಘಟನೆ ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಸಾಗರ ಟೌನ್‌ನ ಆಶ್ರಯ ಬಡಾವಣೆಯ ಶ್ರೀಧರ ನಗರ 1ನೇ ಕ್ರಾಸ್ ನಿವಾಸಿ ಗಾಯತ್ರಿ ಕೋಂ ರಾಮಪ್ಪ ಪುತ್ರ ಹಿಮವಂತ (14) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಹಿಮವಂತನು ಕೆಲವು ದಿನಗಳ ಹಿಂದೆ ಮನೆಯ ಹತ್ತಿರವಿದ್ದ ನಲ್ಲಿಯಲ್ಲಿ ನೀರು ತರಲು ಹೋದಾಗ ಕಾಲು ಜಾರಿ ಬಿದ್ದಿದ್ದನು. ಇದರಿಂದ ಬಲವಾದ ಏಟು ಬಿದ್ದು ತೀವ್ರ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆತನ ಸೊಂಟಕ್ಕೆ ಬೆಲ್ಟ್ ಅಳವಡಿಸಲಾಗಿತ್ತು. ಆದರೆ, ಆತ “ನೋವು ತಡೆಯಲು ಆಗುತ್ತಿಲ್ಲ” ಎಂದು ಪದೇ ಪದೇ ತಾಯಿಯಲ್ಲಿ ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ.

ಆಗಸ್ಟ್ 10, 2026ರಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:30ರ ನಡುವಿನ ಅವಧಿಯಲ್ಲಿ, ತಾಯಿ ಹಾಗೂ ಅಪ್ಪ ಕೂಲಿ ಕೆಲಸಕ್ಕೆ ಹೋಗಿದ್ದಾಗ ಹಾಗೂ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಹಿಮವಂತನು ತೀವ್ರ ನೋವು ತಾಳಲಾರದೆ ಮನೆಯ ಅಟ್ಟದ ತೊಲೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 1:30ರ ಸುಮಾರಿಗೆ ಹಿಮವಂತನ ಅಜ್ಜಿ (ಸರೋಜಮ್ಮ) ಮನೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಗೇಟ್ ಹಾಕಲಾಗಿತ್ತು. ಕಿಟಕಿ ತೆರೆದು ನೋಡಿದಾಗ ಬಾಲಕ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಆತನನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು












