✒️..ಅಮಿತ್ ಆರ್ ಆನಂದಪುರ
ಸಾಗರ (ಆನಂದಪುರ): ಮುಂಬರುವ ಗಣೇಶೋತ್ಸವವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸುವಂತೆ ಸಾರ್ವಜನಿಕರು ಮತ್ತು ಗಣೇಶೋತ್ಸವ ಸಮಿತಿಗಳಿಗೆ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಸೂಚನೆ ನೀಡಿದ್ದಾರೆ.
ಆನಂದಪುರ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಆನಂದಪುರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಅವರು ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ, ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ಮುನ್ನೆಚ್ಚರಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.
ಡಿಜೆ ಬಳಕೆಗೆ ಸಂಪೂರ್ಣ ನಿಷೇಧ
ಸುಪ್ರೀಂ ಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೌಂಡ್ ಸಿಸ್ಟಮ್ ಬಳಸುವವರು ನಿಗದಿತ ಶಬ್ದಮಿತಿಯಲ್ಲೇ ಧ್ವನಿ ಇಡಬೇಕು. ಶಬ್ದದ ಪ್ರಮಾಣ ಪರಿಶೀಲಿಸಲು ಪೊಲೀಸ್ ಸಿಬ್ಬಂದಿಗೆ ವಿಶೇಷ ಆ್ಯಪ್ ನೀಡಲಾಗಿದ್ದು, ನಿಗದಿತ ಮಿತಿಯನ್ನು ಮೀರಿದರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವೀಣ್ ಎಚ್ಚರಿಸಿದರು.

ಡಿಜೆ ಬಳಕೆಗೆ ಬದಲಾಗಿ ಡೊಳ್ಳು ಕುಣಿತ, ತಾಳಮದ್ದಳೆ, ಬೊಂಬೆ ಕುಣಿತ ಹಾಗೂ ಭಜನೆಯಂತಹ ದೇಶಿ ಸಾಂಸ್ಕೃತಿಕ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಮಿತಿಗಳಿಗೆ ಮನವಿ ಮಾಡಿದರು.
ಗಣಪತಿ ಸಮೀಪದ ದೀಪದ ಬಗ್ಗೆಯೂ ಎಚ್ಚರಿಕೆ
ಗಣಪತಿ ಮೂರ್ತಿಯ ಸಮೀಪ ಉರಿಸುವ ದೀಪವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೀಪ ಉರಿಯುತ್ತಿರುವ ಅವಧಿಯಲ್ಲಿ ಅದನ್ನು ನಿರಂತರವಾಗಿ ಗಮನಿಸಲು ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ನಿಯೋಜಿಸಬೇಕು. ವಿದ್ಯುತ್ ಹಾಗೂ ಅಗ್ನಿ ಅವಘಡಗಳಿಗೆ ಆಸ್ಪದವಾಗದಂತೆ ಸಮಿತಿಯವರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಯಿತು.
ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಮಿತಿ ಸದಸ್ಯರು ಸಂಪೂರ್ಣ ಜವಾಬ್ದಾರಿ ವಹಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು, ಆರ್ಕೆಸ್ಟ್ರಾ, ನಾಟಕ ಅಥವಾ ಯಕ್ಷಗಾನ ಆಯೋಜಿಸುವ ಮುನ್ನ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಅಗತ್ಯ ಬಂದೋಬಸ್ತ್ ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದರು.
ಮೆರವಣಿಗೆ ಹಾಗೂ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಮಿತಿ ಸದಸ್ಯರನ್ನು ಸುಲಭವಾಗಿ ಗುರುತಿಸಲು ಪ್ರತ್ಯೇಕ ಟೀ-ಶರ್ಟ್, ಟ್ಯಾಗ್, ಶಾಲು ಅಥವಾ ಟೋಪಿಯಂತಹ ಗುರುತಿನ ಸಂಕೇತಗಳನ್ನು ಬಳಸುವಂತೆ ಸೂಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಪಟಾಕಿ ಸಿಡಿಸಬೇಕು. ಮಕ್ಕಳು ಹಾಗೂ ವಾಹನಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಸಂಪೂರ್ಣ ಶಿಸ್ತು ಪಾಲಿಸಬೇಕು. ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಗಣೇಶೋತ್ಸವ ಮಂಡಳಿಗಳು ತಮ್ಮ ವಿಸರ್ಜನಾ ಮೆರವಣಿಗೆಯ ದಿನಾಂಕ ಹಾಗೂ ಮಾರ್ಗದ ಕುರಿತು ಠಾಣೆಯಲ್ಲಿ ಮುಂಚಿತವಾಗಿ ಚರ್ಚಿಸಿ ಅಂತಿಮಗೊಳಿಸಬೇಕು ಎಂದು ತಿಳಿಸಲಾಯಿತು.
ಗಣೇಶೋತ್ಸವವು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಯಲು ಸಾರ್ವಜನಿಕರು ಹಾಗೂ ಯುವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಮನವಿ ಮಾಡಿದರು.



