ಸಾಗರ(ಆನಂದಪುರ):ಹಾಲಪ್ಪನವರು ಮೊದಲು ಚೇತನ್ ರಾಜ್ ಕಣ್ಣೂರು ಅವರಿಗೆ ಸಂಘಟನೆ ಮಾಡಲಿ, ಬೆಳೆಯಲಿ ಎಂದು ಜೊತೆಯಲ್ಲಿ ಇಟ್ಟುಕೊಂಡು ನಡೆಸಿದರು. ಆದರೆ ಮೋಸ ಮಾಡಿ, ದುಡ್ಡು ಹೊಡೆದುಕೊಂಡು, ಕುತಂತ್ರ ಮಾಡಿ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಅಲ್ಲಿಯೂ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು.
ಇವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಲಪ್ಪನವರ ಜೊತೆಯಲ್ಲಿದ್ದು ತಂತ್ರಗಾರಿಕೆ ಮಾಡಿ, ವ್ಯವಹಾರದ ಬುದ್ಧಿಯಿಂದ ಹಾಲಪ್ಪನವರಿಗೆ ಕೆಟ್ಟ ಹೆಸರು ತಂದು ಮೋಸ ಮಾಡಿ, ಕೊನೆಯ ಸಮಯದಲ್ಲಿ ತಮ್ಮ ತಂತ್ರಗಾರಿಕೆ ಗೊತ್ತಾಗುವ ವೇಳೆ ಪಕ್ಷವನ್ನು ತೊರೆದು ಬಂದವರು ಚೇತನ್ ರಾಜ್ ಕಣ್ಣೂರು ಎಂದು ಕಿಡಿಕಾರಿದರು.
ಕಾಗೋಡು ತಿಮ್ಮಪ್ಪನವರ ಜೊತೆ ಸೇರಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಇದರ ಫಲವಾಗಿ ಶಾಸಕರು ಗೆದ್ದಿದ್ದಾರೆ. ಆದರೆ ಈಗ ಕಾಂಗ್ರೆಸ್ ಪಕ್ಷದೊಳಗೆ ಸೇರಿ ಕಾಂಗ್ರೆಸ್ಸಿಗರನ್ನು ದಾರಿ ತಪ್ಪಿಸುತ್ತಿದ್ದೀರಲ್ಲ. 2028ರ ಚುನಾವಣೆಯಲ್ಲಿ ನಿಮ್ಮ ನಾಯಕರನ್ನು ಗೆಲ್ಲಿಸಿ ತೋರಿಸಿ, ಚೇತನ್ ರಾಜ್ ಕಣ್ಣೂರು, ನಾನು ನೋಡುತ್ತೇನೆ ಎಂದರು.

ಚುನಾವಣೆಗೋಸ್ಕರ ಹೊಗಳಿಕೆ
ಎಪಿಎಂಸಿ ಅಧ್ಯಕ್ಷರಾಗಿದ್ದಾಗ ಅಲ್ಲಿ ಯಾವ ರೀತಿ ಭ್ರಷ್ಟಾಚಾರ ಮಾಡಿದ್ದೀರಿ ಎಂಬುದು ಇಂದು ನನಗೆ ತಿಳಿದಿದೆ. ಈಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಬಂದಿದೆಯಲ್ಲ. ಶಾಸಕರ ಬಳಿ ಹಣವಿದೆ, ಆ ಹಣವನ್ನು ಹಾಕಿ ನಮಗೆ ಚುನಾವಣೆಯಲ್ಲಿ ಸಹಾಯ ಮಾಡುತ್ತಾರೆಂದು ಶಾಸಕರನ್ನು ಹೊಗಳಿ ಮಾತನಾಡುತ್ತಿದ್ದೀರಿ. ಚೇತನ್ ರಾಜ್ ಕಣ್ಣೂರು, ಇದು ಸರಿಯೇ ಎಂದು ಪ್ರಶ್ನಿಸಿದರು.
ಹಾಲಪ್ಪನವರು ಹಸಿರುಮಕ್ಕಿ ಸೇತುವೆ ವಿಚಾರದಲ್ಲಿ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ತಾಂತ್ರಿಕ ದೋಷದಿಂದ ಹಾಗೆಯೇ ನಿಂತಿತ್ತು. ಅದನ್ನು ತಮ್ಮ ಅವಧಿಯಲ್ಲಿ ಸರಿಪಡಿಸಿ ಕೆಲಸ ಪ್ರಾರಂಭಿಸಿದರು. ಹಾಗೆಯೇ ಪಟಗುಪ್ಪೆ ಸೇತುವೆ, ಅಂಬಲಿಗೋಳದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ನೂರಾರು ಕೋಟಿ ರೂಪಾಯಿಗಳ ಹತ್ತಾರು ಯೋಜನೆಗಳನ್ನು ಹಾಲಪ್ಪನವರು ತಮ್ಮ ಅವಧಿಯಲ್ಲಿ ತಂದಿದ್ದಾರೆ ಎಂದರು.
ಹಾಲಪ್ಪನವರು ಕಾಗೋಡು ತಿಮ್ಮಪ್ಪನವರ ವಿರುದ್ಧ ಗೆದ್ದಾಗ ಗೌರವದಿಂದ ನಡೆದುಕೊಂಡರು. ಆದರೆ ಗೋಪಾಲಕೃಷ್ಣ ಬೇಳೂರು ಹಾಗೂ ಅವರ ತಂಡ ಅವರನ್ನು ಉಪಯೋಗಿಸಿಕೊಂಡು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಕಂಡು ಬೇಸರವಾಗಿದೆ ಎಂದು ವ್ಯಕ್ತಪಡಿಸಿದರು.
ತಿಮ್ಮಪ್ಪನವರು ಗೆದ್ದ ಸಮಯದಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ ಇಷ್ಟೆಲ್ಲಾ ತೊಂದರೆ ಕೊಟ್ಟರು ಹಾಗೂ ಯಾವ ಭಾಷೆಯಲ್ಲಿ ಬೈದಿದ್ದರು ಎಂಬುದೆಲ್ಲ ನಮಗೆ ಗೊತ್ತಿದೆ. ಇದು ಸುಳ್ಳು ಎಂದಾದರೆ ಸಿಗಂದೂರು ಅಥವಾ ಸಾಗರ ಗಣಪತಿ ದೇವಸ್ಥಾನಕ್ಕೆ ಬನ್ನಿ, ನಾನು ಬರುತ್ತೇನೆ ಎಂದು ಸವಾಲು ಹಾಕಿದರು.
ಶಾಸಕರು ಬರೀ ಟಾಟಾ ಮಾಡಿ, ಗುದ್ದಲಿ ಪೂಜೆ ಮಾಡಿ ಹೋಗುವುದೇ ಅವರ ಅಭ್ಯಾಸವಾಗಿದೆ. ಗುದ್ದಲಿ ಪೂಜೆ ಮಾಡಿ ಹೋಗಲಿಕ್ಕೆ ನೀವೇ ಬೇಕಾ? ಕಾಗೋಡು ತಿಮ್ಮಪ್ಪ ಹಾಗೂ ಹಾಲಪ್ಪನವರ ಅವಧಿಯಲ್ಲಿ ಗುದ್ದಲಿ ಪೂಜೆಯ ಬಗ್ಗೆ ಯೋಚಿಸುತ್ತಿರಲಿಲ್ಲ, ಕಾಮಗಾರಿಗಳ ಬಗ್ಗೆ ಚಿಂತಿಸುತ್ತಿದ್ದರು ಎಂದರು.

ಕಣ್ಣೀರು ಹಾಕಿ ಓಟು:
ಗೋಪಾಲಕೃಷ್ಣ ಬೇಳೂರು ಹಾಗೂ ಅವರ ಕುಟುಂಬದವರು ಚುನಾವಣೆಯ ಸಮಯದಲ್ಲಿ ಕಣ್ಣೀರು ಹಾಕಿ ಮತ ಗಿಟ್ಟಿಸಿಕೊಂಡಿದ್ದ ಬಗ್ಗೆ ನಮಗೆ ತಿಳಿದಿದೆ. ರಿಪ್ಪನಪೇಟೆಯಲ್ಲಿ ಕಣ್ಣೀರು ಹಾಕಿದ್ದರು. ಆದರೆ ಅಂದು ಇದ್ದ ಜನರ ಮೇಲೆ ಇದ್ದ ಅನುಕಂಪ, ಪ್ರೀತಿ ಗೆದ್ದ ಮೇಲೆ ಯಾಕಿಲ್ಲ? ನೂರಾರು ಕೋಟಿಯ ಆಸ್ತಿ , ಕಾರು ತೆಗೆದುಕೊಂಡು ಮಜಾ ಮಾಡುತ್ತಿದ್ದೀರಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರದಿಂದ ಹಣ ಮಾಡಿ, ಶಾಸಕರು ಅಲ್ಲಿ ಅಜ್ಜಿಗೆ ಹಣ ಕೊಟ್ಟೆ, ಇಲ್ಲಿ ಕೊಟ್ಟೆ ಎಂದು ಫೋಟೋಗೆ ಪೋಸ್ ಕೊಡುತ್ತಾರೆ. ಹಾಗೆ ನೋಡಿದರೆ ನಾನು ದಿನನಿತ್ಯ ಅನೇಕರಿಗೆ ಸಹಾಯ ಮಾಡುತ್ತೇನೆ. ನನಗೂ ಒಂದು ಸೋಶಿಯಲ್ ಮೀಡಿಯಾ ತಂಡವನ್ನು ಇಟ್ಟುಕೊಳ್ಳಬೇಕು. ಆದರೆ ನಾನಾಗಲಿ, ಹಾಲಪ್ಪನವರಾಗಲಿ ಕಷ್ಟ ಎಂದು ಬಂದವರಿಗೆ ಹಣ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಮನಸ್ಥಿತಿಯವರಲ್ಲ. ಸಹಾಯ ಮಾಡಿದ ವಿಚಾರವನ್ನು ಯಾವ ರೀತಿಯಲ್ಲಿಯೂ ಹೇಳಿಕೊಳ್ಳುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಮೋಹನ್ , ಗುರುರಾಜ್, ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಪಕ್ಷದ ಮುಖಂಡರಾದ ರೇವಪ್ಪ ಹೊಸಕೊಪ್ಪ,ಮೋಹನ್ , ಚೌಡಪ್ಪ ಉಪಸ್ತಿತರಿದ್ದರು.



