ಸಾರ್ವಜನಿಕರು ಭಾಗವಹಿಸಲು ಪೊಲೀಸ್ ಸಬ್ಇನ್ಸ್ಪೆಕ್ಟರ್ ಪ್ರವೀಣ್ ಮನವಿ.
ಸಾಗರ(ಆನಂದಪುರ): ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು 10ರಿಂದ 11 ಕ್ವಿಂಟಾಲ್ ಹಸಿ ಅಡಿಕೆಯನ್ನು ನ್ಯಾಯಾಲಯದ ಆದೇಶದಂತೆ ಬಹಿರಂಗ ಹರಾಜು ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಆನಂದಪುರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಂದರ್ಭದಲ್ಲಿ ಪಂಚರ ಸಮಕ್ಷಮ ಹಸಿ ಅಡಿಕೆಯನ್ನು ವಶಕ್ಕೆ ಪಡೆದು, ಮಾಲುಪಟ್ಟಿಯಲ್ಲಿ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.
ಜಪ್ತಿ ಮಾಡಲಾದ ಹಸಿ ಅಡಿಕೆ ಬೇಗನೆ ಹಾಳಾಗುವ ಸಾಧ್ಯತೆ ಇರುವುದರಿಂದ ಹಾಗೂ ಅದರ ವಾರಸುದಾರರ ಕುರಿತು ವಿವಾದವಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಸೂಚನೆ ಮತ್ತು ಆದೇಶದಂತೆ ಹಸಿ ಅಡಿಕೆಯನ್ನು ಬಹಿರಂಗ ಹರಾಜು ಮಾಡಿ, ಅದರಿಂದ ಬಂದ ಹಣವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ.

ಹರಾಜಿನ ವಿವರಗಳು
- ದಿನಾಂಕ: ಅಕ್ಟೋಬರ್ 29, 2026
- ಸಮಯ: ಸಂಜೆ 5 ಗಂಟೆ
- ಸ್ಥಳ: ಆನಂದಪುರ ಪೊಲೀಸ್ ಠಾಣೆಯ ಮುಂಭಾಗ
ಆಸಕ್ತ ಸಾರ್ವಜನಿಕರು ಹಾಗೂ ಹರಾಜುದಾರರು ನಿಗದಿತ ಸಮಯದಲ್ಲಿ ಹಾಜರಾಗಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆನಂದಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



