Home Shivamogga Sagara ಸಾಗರ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಮಹಿಳೆ ಸಾವು..!!

ಸಾಗರ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಮಹಿಳೆ ಸಾವು..!!

0
2

ಸಾಗರ: ತಾಲೂಕಿನ ಆನಂದಪುರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಭಾನುವಾರ ಸಂಜೆ 5:30 ವೇಳೆಗೆ ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಎರಡೂ ಕಾರುಗಳಲ್ಲಿದ್ದ ಇತರ ಪ್ರಯಾಣಿಕರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ

ಶಿವಮೊಗ್ಗದಿಂದ ಸಾಗರದ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಸಾಗರದಿಂದ ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತಿದ್ದ ಮತ್ತೊಂದು ಕಾರಿನ ನಡುವೆ ಆನಂದಪುರ ಸಮೀಪದ ಗೀಳಾಲ ಗುಂಡಿ ಬಳಿ ಅಪಘಾತ ಸಂಭವಿಸಿದೆ.

ಶಿವಮೊಗ್ಗದಿಂದ ಸಾಗರಕ್ಕೆ ಪ್ರಯಾಣಿಸುತ್ತಿದ್ದ ಚಿಕ್ಕಮಗಳೂರು ಮೂಲದ ಕುಟುಂಬವೊಂದು ಕಾರಿನಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಈ ಕಾರಿನಲ್ಲಿ ಸುಮಾರು ಐದರಿಂದ ಆರು ಮಂದಿ ಇದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಪೈಕಿ ಮುಸ್ಲಿಂ ಕುಟುಂಬಕ್ಕೆ ಸೇರಿದ ಆಶಾ ಬಾನು ಎಂಬ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಸಾಗರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಗಳೂರಿನ ಮಂಜುನಾಥ್‌ (ತಂದೆ ಮಾರೇಗೌಡ) ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರು ಪ್ರವಾಸಕೆಂದು ಬಂದು ಹಿಂದಿರುಗಿ ಬೆಂಗಳೂರಿಗೆ ಹೋಗುತ್ತಿದ್ದರು .ಈ ಕಾರಿನಲ್ಲಿಯೂ ಐವರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಅಪಘಾತದಲ್ಲಿ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂಪೂರ್ಣ ವಿವರಗಳು ಹಾಗೂ ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

NO COMMENTS