Home Shivamogga Sagara ಆನಂದಪುರದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ವಿಜಯದಶಮಿ ಬನ್ನಿ ಉತ್ಸವ..!!

ಆನಂದಪುರದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ವಿಜಯದಶಮಿ ಬನ್ನಿ ಉತ್ಸವ..!!

0
12

ದೇವರುಗಳ ಪಲ್ಲಕ್ಕಿ ಮೆರವಣಿಗೆಗೆ ಸಾಕ್ಷಿಯಾದ ರಾಜಬೀದಿಗಳು; ಧರ್ಮೋ ರಕ್ಷತಿ ರಕ್ಷಿತಃ ಎಂದ ಉಪತಹಶೀಲ್ದಾರ್ ಶಾಂತಮೂರ್ತಿ

ಸಾಗರ(ಆನಂದಪುರ): ವಿಜಯದಶಮಿ ಹಬ್ಬದ ಅಂಗವಾಗಿ ಆನಂದಪುರದಲ್ಲಿ ಸಾಂಪ್ರದಾಯಿಕ ಬನ್ನಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳ ದೇವರುಗಳ ಪಲ್ಲಕ್ಕಿ ಉತ್ಸವ ಹಾಗೂ ರಾಜಬೀದಿ ಮೆರವಣಿಗೆ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.

ಆನಂದಪುರದ ಶ್ರೀ ರಂಗನಾಥ ಸ್ವಾಮಿ, ಆಂಜನೇಯ ಸ್ವಾಮಿ, ಬಾಲಸುಬ್ರಹ್ಮಣ್ಯ ಸ್ವಾಮಿ, ಗುತ್ಯಮ್ಮ ದೇವಿ, ತುಳಜಾ ಭವಾನಿ ದೇವಿ, ಎಲ್ಲಮ್ಮ ದೇವಿ, ಕೋಟೆ ವೀರಾಂಜನೇಯ ಸ್ವಾಮಿ ಹಾಗೂ ದಾಸಕೊಪ್ಪದ ಶ್ರೀ ಪಾಂಡುರಂಗ ದೇವಸ್ಥಾನದ ದೇವರುಗಳ ಪಲ್ಲಕ್ಕಿಗಳು ಭವ್ಯ ಮೆರವಣಿಗೆಯಲ್ಲಿ ಸಾಗಿದವು. ವಿವಿಧ ರಾಜಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿಗಳು ಮಹಾಂತಿನ ಮಠದ ಬನ್ನಿಮಂಟಪವನ್ನು ತಲುಪಿದವು.

ಧರ್ಮೋ ರಕ್ಷತಿ ರಕ್ಷಿತಃ: ಶಾಂತಮೂರ್ತಿ

ವಿಜಯದಶಮಿಯ ಶುಭ ಸಂದರ್ಭದಲ್ಲಿ ಬನ್ನಿಮಂಟಪದಲ್ಲಿ ನಾಡಕಚೇರಿಯ ಉಪತಹಶೀಲ್ದಾರ್ ಶಾಂತಮೂರ್ತಿ ಅವರ ನೇತೃತ್ವದಲ್ಲಿ ಶಮಿ ವೃಕ್ಷ ಪೂಜೆ ಹಾಗೂ ಬನ್ನಿ ಒಡೆಯುವ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಈ ಸಂದರ್ಭದಲ್ಲಿ ಮಾತನಾಡಿದ ಉಪತಹಶೀಲ್ದಾರ್ ಶಾಂತಮೂರ್ತಿ ಅವರು, “ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಈ ಬಾರಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಿಂದ ಬದುಕುವಂತಾಗಲಿ. ನಾಡಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ” ಎಂದು ಆಶಯ ವ್ಯಕ್ತಪಡಿಸಿದರು.

ಬನ್ನಿ ಉತ್ಸವದ ಅಂಗವಾಗಿ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿಯ ಶುಭಾಶಯಗಳನ್ನು ಹಂಚಿಕೊಂಡರು. ಧಾರ್ಮಿಕ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಭಕ್ತಿಭಾವ ಮನೆಮಾಡಿತ್ತು.

ಬನ್ನಿಮಂಟಪದಲ್ಲಿ ಕುಸ್ತಿ ಪಂದ್ಯಾಟ

ಬನ್ನಿ ಉತ್ಸವದ ಅಂಗವಾಗಿ ಬನ್ನಿಮಂಟಪದಲ್ಲಿ ಕುಸ್ತಿ ಪಂದ್ಯಾಟವೂ ನಡೆಯಿತು. ಕುಸ್ತಿಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು.

ಆನಂದಪುರದ ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದ ಬನ್ನಿ ಉತ್ಸವವು ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆಯಿತು. ವಿವಿಧ ದೇವಸ್ಥಾನಗಳ ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಜಯದಶಮಿ ಸಂಭ್ರಮಕ್ಕೆ ಮೆರುಗು ನೀಡಿದವು.

ಈ ಸಂದರ್ಭದಲ್ಲಿ ಧರ್ಮರಕ್ಷಾ ಸಮಿತಿಯ ಪದಾಧಿಕಾರಿಗಳು, ಉತ್ಸವ ಸಮಿತಿಯ ಸದಸ್ಯರು, ವಿವಿಧ ದೇವಸ್ಥಾನಗಳ ಪ್ರಮುಖರು, ಕುಸ್ತಿ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

NO COMMENTS