ಬಿಜೆಪಿ ಮುಖಂಡರ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ; ದುಡ್ಡಿನ ಬಲದಿಂದ ಜನರನ್ನು ದಿಕ್ಕು ತಪ್ಪಿಸಬೇಡಿ ಎಂದು ತಿರುಗೇಟು.
ಸಾಗರ(ಆನಂದಪುರ): ಕಾಂಗ್ರೆಸ್ ಪಕ್ಷದ ಪರವಾಗಿ ಧ್ವನಿ ಎತ್ತಿ ಸಂಘಟನೆಗಾಗಿ ದುಡಿದಿದ್ದ ನನಗೆ ಇದೀಗ ಅಧಿಕಾರದ ಜವಾಬ್ದಾರಿ ದೊರೆತಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಅನಾವಶ್ಯಕವಾಗಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಯ ನೂತನ ಸದಸ್ಯ ಲಿಂಗರಾಜ್ ಗೇರ್ಬೀಸ್ ಪರೋಕ್ಷವಾಗಿ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಸಾಗರ ತಾಲೂಕಿನಿಂದ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆನಂದಪುರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅನಾವಶ್ಯಕವಾಗಿ ಕಾಲೆಳೆಯುವ ಪ್ರವೃತ್ತಿಯನ್ನು ಬಿಡಬೇಕು. ಮುಗಿಲು ನೋಡಿಕೊಂಡು ಉಗಿದುಕೊಂಡರೆ ಅದು ಮರಳಿ ನಮ್ಮ ಮುಖಕ್ಕೇ ಬರುತ್ತದೆ. ದುಡ್ಡಿನ ಆಧಾರದ ಮೇಲೆ ಸವಾಲುಗಳನ್ನು ಹಾಕಿ, ಜನರನ್ನು ಪ್ರತಿನಿಧಿಸುತ್ತೇನೆ ಎಂಬ ಮನೋಭಾವವನ್ನು ಕೈಬಿಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಹಣದ ಬಲವಿದೆ ಎಂಬ ಕಾರಣಕ್ಕೆ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ನಮ್ಮ ಪಕ್ಷದಲ್ಲಿರುವ ನ್ಯೂನತೆಗಳನ್ನು ಗುರುತಿಸಿ, ಅವುಗಳ ಬಗ್ಗೆ ರಚನಾತ್ಮಕವಾಗಿ ಮಾತನಾಡಲಿ. ಆಗಬೇಕಾದ ಕೆಲಸಗಳ ಕುರಿತು ಸಲಹೆ ನೀಡಲಿ. ಅದನ್ನು ಬಿಟ್ಟು ನಮ್ಮ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತೇಜೋವಧೆ ಮಾಡುವುದು ಸರಿಯಲ್ಲ. ಇಂತಹ ಆರೋಪಗಳು ಮುಂದುವರಿದರೆ ಇನ್ನು ಮುಂದೆ ಮೌನವಾಗಿರುವುದಿಲ್ಲ ಎಂದು ಎಚ್ಚರಿಸಿದರು.

ಪಕ್ಷಕ್ಕಾಗಿ ದುಡಿದಿದ್ದಕ್ಕೆ ಮನ್ನಣೆ.
ಕಾಂಗ್ರೆಸ್ ಪಕ್ಷದ ತಳಮಟ್ಟದಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಿಗಮ-ಮಂಡಳಿಗಳಿಗೆ ಒಟ್ಟು 428 ಮಂದಿಯನ್ನು ನೇಮಕ ಮಾಡಿದೆ. ಈ ಮೂಲಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪರಿಶ್ರಮಕ್ಕೆ ಮನ್ನಣೆ ದೊರೆತಿದೆ. ಸಾಗರ ತಾಲೂಕಿನಿಂದ ನನ್ನನ್ನ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರ ಮಾರ್ಗದರ್ಶನ ಹಾಗೂ ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಶಾಸಕ ಸಂಗಮೇಶ್ ಸೇರಿದಂತೆ ಪಕ್ಷದ ನಾಯಕರ ಸಹಕಾರದಿಂದ ಈ ಅವಕಾಶ ದೊರೆತಿದೆ. ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ತತ್ವಗಳು ಹಾಗೂ ಜವಾಹರಲಾಲ್ ನೆಹರೂ ಅವರ ಆಶಯಗಳಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಬುಲ್ ಸಾಬ್ರು, ಗಜೇಂದ್ರ ಯಾದವ್,ಲೋಕೇಶ್, ಕಲೀಮ್ ಉಲ್ಲಾಖಾನ್, ಶರತ್ ನಾಗಪ್ಪ, ರಮಾನಂದ ಸಾಗರ್, ಅಪ್ಸರ್, ಶೌಕತ್, ರವಿಕುಮಾರ್, ಸಿರಾಜ್ , ರವಿ ಜಂಬೂರ್ ಮನೆ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.



