ಮನೆ Blog ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ಪೊಲೀಸ್‌ ನೇಮಕಾತಿ: ಸಿಎಂ ಸಿದ್ದರಾಮಯ್ಯ…!!

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ಪೊಲೀಸ್‌ ನೇಮಕಾತಿ: ಸಿಎಂ ಸಿದ್ದರಾಮಯ್ಯ…!!

76
0

ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕವಿಜೇತ ಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಮ್ಮ ಸರ್ಕಾರ ನಿರ್ಧರಿಸಿದೆ. ಪೊಲೀಸ್‌ ಇಲಾಖೆಯಲ್ಲಿ ಶೇ.3ರಷ್ಟು ಹುದ್ದೆಗಳು ಮತ್ತು ಇತರೆ ಇಲಾಖೆಗಳಲ್ಲಿ ಶೇ. 2ರಷ್ಟು ಹುದ್ದೆಗಳನ್ನು ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಮತ್ತು ರಾಜ್ಯ ಒಲಂಪಿಕ್ ಅಸೋಸಿಯೇಷನ್ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಮಿನಿ ಕರ್ನಾಟಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಚಿನ್ನ 10 ಲಕ್ಷ ರೂ. ಬೆಳ್ಳಿ 5 ಲಕ್ಷ ರೂ. ಮತ್ತು ಕಂಚು ಪದಕ ವಿಜೇತರಿಗೆ 2 ಲಕ್ಷ ರೂ. ನಗದು ನೀಡಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿದೆ.ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಲ್ಲೂ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುವುದು. ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಎಂಬುದು ನಮ್ಮ ಆಶಯ ಎಂದರು. ನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ನಿಮ್ಮ ಉತ್ಸಾಹಕ್ಕೆ ತಕ್ಕಂತೆ ನಮ್ಮ ಪ್ರೋತ್ಸಾಹ ಸದಾ ಸಿದ್ಧವಿದೆ ಎಂದು ಘೋಷಿಸಿದರು.

ರಾಜ್ಯ ಒಲಂಪಿಕ್ ಅಸೋಸಿಯೇಷನ್‌ ಅಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ಕೋಚ್‌ಗಳು ಇಲ್ಲದ್ದರಿಂದ ಮಕ್ಕಳಿಗೆ ಕ್ರೀಢಾ ತರಬೇತಿ ನೀಡುವುದು ಆಗುತ್ತಿಲ್ಲ. ಆದ್ದರಿಂದ 170 ಕೋಚ್‌ಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಅವರು ಕೋಚ್‌ಗಳ ನೇಮಕಕ್ಕೆ ಸೂಚನೆ ನೀಡಬೇಕೆಂದು ಕೋರಿದರು.

ಶಾಸಕ ರಿಜ್ವಾನ್‌ ಅರ್ಷದ್ ಮಾತನಾಡಿದರು. ಸಚಿವ ರಾಮಲಿಂಗಾರೆಡ್ಡಿ, ಅನಂತರಾಜು. ಚೇತನ್, ಸರ್ಕಾರದ ಕಾರ್ಯದರ್ಶಿ ನವೀನ್‌ರಾಜ ಸಿಂಗ್ ವೇದಿಕೆ ಮೇಲಿದ್ದರು.ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತಿ ಮುಖ್ಯ: ಸಿದ್ದುನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಪ್ರೋತ್ಸಾಹ ಕೊಟ್ಟುಕೊಂಡೇ ಬರುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಇಂಥಾ ಕ್ರೀಡಾಕೂಟ ಸಹಕಾರಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ.

ಕ್ರೀಡೆಯಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸುವಿಕೆ ಅತಿ ಮುಖ್ಯ ಎಂದರು.ಇಂದಿನ ಕ್ರೀಡೆಯಲ್ಲಿ ಸೋತರೆ ಮುಂದಿನ ವರ್ಷದ ಕ್ರೀಡೆಯಲ್ಲಿ ಗೆಲ್ಲಲೇಬೇಕು ಎಂಬ ಛಲ ನಿಮ್ಮಲ್ಲಿರಲಿ. ಗೆಲುವು ಅಮೂಲ್ಯ. 14 ವರ್ಷದ ಮಕ್ಕಳಿಗಾಗಿ ಮಿನಿ ಕರ್ನಾಟಕ ಕ್ರೀಡಾಕೂಟ ಏರ್ಪಡಿಸಿ ಮಕ್ಕಳಲ್ಲಿ ಕ್ರೀಡಾ ಮನೋಭಾವದ ಜತೆಗೆ ಸೂಕ್ತ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶ. ಒಲಿಂಪಿಕ್ಸ್, ಏಷ್ಯನ್, ಕಾಮನ್ವೆಲ್ತ್‌ ಸೇರಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮಕ್ಕಳನ್ನು ತಯಾರು ಮಾಡಲು ಇದು ಅಡಿಪಾಯ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಾಪ್ ಗ್ರೂಪನ್ನು ಸೇರಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ :https://chat.whatsapp.com/CnYYumPSez6AMYyw8cHG9A?mode=ac_t