ಆನಂದಪುರ ಸುತ್ತಮುತ್ತಲಿನ ರೈತರು ಇಂದು ಹೊಲ-ಗದ್ದೆಗಳು ಮತ್ತು ತೋಟಗಳಿಗೆ ಸಡಗರದಿಂದ ಹೋಗಿ ಭೂಮಿ ತಾಯಿಗೆ ಪೂಜೆ ಮಾಡಿ ಚರಗ ಚೆಲ್ಲುವ ಮೂಲಕ ಶೀಗೆ ಹುಣ್ಣಿಮೆ ಹಬ್ಬದ ಆಚರಣೆ ರೈತರು ಸಂಭ್ರಮದಿಂದ ಆಚರಿಸಿದರು.

ವರ್ಷವಿಡೀ ಕಷ್ಟ ಪಟ್ಟು ಬೆಳೆದ ಫಸಲನ್ನು ಪೂಜೆ ಮಾಡಿ, ಹಸಿರು ಸೀರೆಯ ನುಡಿಸಿ ಭೂ ತಾಯಿಯನ್ನು ಆರಾಧಿಸಿದರು.ಮುಂಗಾರು ಬೆಳೆಗಳಿಂದ ಮಡಿಲು ತುಂಬಿಕೊಂಡು ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಾಗಿ ಕಾಣುವಂಥ ಹೊಲಗಳಲ್ಲಿ ಫಸಲುಗಳೆಲ್ಲ ಕೊಯ್ಲಿಗೆ ಬಂದಿರುವ ಈ ಹೊತ್ತಿನಲ್ಲಿ ಭೂಮಿತಾಯಿಗೆ ಬಾಗಿನ ಅರ್ಪಣೆ, ಉಡಿ ತುಂಬುವುದು, ಹಾಗೂ ಚರಗ ಚೆಲ್ಲಿ ಭಕ್ತಿ ಸಮರ್ಪಿಸುವುದರ ಮೂಲಕ ಮಲೆನಾಡಿನ ವಿಶಿಷ್ಠ ಸಂಪ್ರದಾಯದಂತೆ ರೈತರು ಹಬ್ಬವನ್ನು ಆಚರಿಸಿದರು.

ಮುಂಗಾರು ಮಳೆ ಮುಗಿಯುತ್ತ ಬಂದಂತೆ ಭತ್ತ, ಅಡಕೆ, ಬಾಳೆ, ಜೋಳ, ಹತ್ತಿ, ದ್ವಿದಳ ಧಾನ್ಯ ಸೇರಿ ಎಲ್ಲ ಫಸಲನ್ನೂ ಹೊತ್ತು ಭೂಮಿ ತಾಯಿ ಮೈದುಂಬಿಕೊಂಡಿರುತ್ತಾಳೆ. ಇಂತಹ ದಿನಗಳಲ್ಲಿ ರೈತರು ಈ ಹಬ್ಬವನ್ನು ಆಚರಿಸಿದರು.
ರೈತರು ಕುಟುಂಬ ಸದಸ್ಯರು, ಬಂಧು-ಬಾಂಧವರು, ನೆರೆ-ಹೊರೆಯವರೊಂದಿಗೆ ಹೊಲಗಳಿಗೆ ಗದ್ದೆಗಳಿಗೆ ಹೋಗಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.ಗರ್ಭವತಿ ಭೂಮಿತಾಯಿಗೆ ತವರು ಮನೆಯವರು ಮಗಳ ಸೀಮಂತ ಕಾರ್ಯ ಮಾಡುವಾಗ ಮಗಳಿಗೆ ಬಯಕೆ ತೀರಿಸಲು ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸಿ ನೀಡುವಂತೆ ರೈತರೂ ಭೂಮಿತಾಯಿ ಮತ್ತು ಬೆಳೆಯನ್ನು ಪೂಜಿಸುವ ಮೂಲಕ ಭೂ ತಾಯಿಗೆ ಸೀಮಂತ ಕಾರ್ಯ ಮಾಡಿದರು.

ಹೊಸ ಫಸಲಿಗೆ ಹೊಸ ಸೀರೆ-ಕುಪ್ಪಸದಿಂದ ಅಲಂಕರಿಸಿ, ಪೂಜೆ ಮಾಡಿ ವಿವಿಧ ಖಾದ್ಯಗಳನ್ನು ನೈವೇದ್ಯ ಸಮರ್ಪಿಸಿದರು.ನಂತರ ಹೊಲದಲ್ಲಿ ಕುಳಿತು ಮೊಸರುಬುತ್ತಿ, ಎಲೆಯ ಕೊಟ್ಟಿಯ ಕಡಬು,ಕಡಬು, ಹೋಳಿಗೆ ಸೇರಿ ವಿಧವಿಧವಾದ ಹಬ್ಬದಡಿಗೆ ಊಟ ಮಾಡಿ ರೈತರು ಸಂಭ್ರಮಿಸಿದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









