ಸಾಗರ: ತಾಲೂಕಿನ ಭಾರಂಗಿ ಹೋಬಳಿಯ ಇಂದೋಡಿಮನೆ ಶಾಲೆಯಿಂದ ಕುಡುಗುಂಜಿವರೆಗೆ 10 ಕಿಮೀ ರಸ್ತೆ ಡಾಂಬರೀಕರಣ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಪ್ರಮುಖರು ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ಮಾತನಾಡಿ, ತಾಲೂಕಿನ ಕುಡುಗುಂಜಿ, ಸುಂಕದಮನೆ, ಕೆರೋಡಿ, ಐತಾಳಮನೆ, ವಟ್ಟಕ್ಕಿ, ಹೆನ್ನಿ ಭಾಗದ ಗ್ರಾಮಗಳಲ್ಲಿ ಹಸಲರು, ಗೊಂಡರು, ಈಡಿಗ ಜನಾಂಗದವರು ವಾಸವಿದ್ದು, ಈ ಭಾಗದಲ್ಲಿ ರಸ್ತೆ ಸಂಪರ್ಕ ಸರಿ ಇಲ್ಲ. ಹರತಾಳು ಹಾಲಪ್ಪ ಶಾಸಕರಾಗಿದ್ದಾಗ ಚುನಾವಣೆ ಪೂರ್ವದಲ್ಲಿ ರಸ್ತೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ರಸ್ತೆ ಕಾಮಗಾರಿ ಪ್ರಾರಂಭಿಸರಲಿಲ್ಲ. ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ಕೂಡಲೇ ರಸ್ತೆ ಡಾಂಬರೀಕಣ ಆರಂಭಿಸದಿದ್ದರೆ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ, ದೇವು ಆಲಳ್ಳಿ, ನಾಗರಾಜ್, ಲಕ್ಷ್ಮಮ್ಮ ಹಿರೇಮನೆ, ಗಣೇಶ್, ಶಿಲ್ಪಾ ಈಶ್ವರಪ್ಪ ಇತರರಿದ್ದರು.
✒️…ಅಮಿತ್ ಆರ್ ಆನಂದಪುರ



ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









