ಆನಂದಪುರ, ಫೆ.4: ಪ್ರಯತ್ನದಿಂದ ಯಶಸ್ಸು ಖಂಡಿತವಾಗಿಯೂ ಸಾಧ್ಯ ಎಂದು ಬಿಇಒ ಸದಾನಂದ ಸ್ವಾಮಿ ಸಿ. ತಿಳಿಸಿದರು.
ಅವರು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಧನೆ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಂತರ ಪರಿಶ್ರಮ ಅಗತ್ಯವಿದ್ದು, ಹೆಚ್ಚು ಬರವಣಿಗೆಯ ಮೂಲಕ ಕಲಿಕೆಯನ್ನು ದೃಢಪಡಿಸಬಹುದು. ಪರಿಶ್ರಮವಿಲ್ಲದೆ ಫಲ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮ್ಮಗೆ ದೊರಕಿರುವ ಇಂತಹ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮೊದಲ ಹಂತದಲ್ಲಿಯೇ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಬದ್ಧರಾಗಬೇಕು. ಇದಕ್ಕೆ ಅಗತ್ಯವಾದ ಬೆಂಬಲವನ್ನು ಶಿಕ್ಷಕರು ಹಾಗೂ ಪೋಷಕರು ನೀಡಬೇಕು ಎಂದು ಅವರು ಹೇಳಿದರು.

ಕಲಿಕೆಗೆ ಪೂರಕವಾದ ಪರಿಸರ ಅತ್ಯಂತ ಅಗತ್ಯವಾಗಿದೆ. ಯಶಸ್ಸಿಗೆ ಒಂದೊಂದು ಅಂಕವೂ ಮಹತ್ವದ್ದೆಂಬುದನ್ನು ಮನವರಿಕೆ ಮಾಡಿಕೊಡುತ್ತಾ, ಅನೇಕ ಸಾಧಕರ ಸಾಧನೆ ಹಾಗೂ ಅವರ ಪರಿಶ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ತಾಲೂಕು ನೋಡಲ್ ಅಧಿಕಾರಿ ಡಾ. ಶಂಕರ್ ಶಾಸ್ತ್ರಿ ಮಾತನಾಡಿ, ಕಲಿಕೆಯ ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಅಂಕಗಳನ್ನು ಪಡೆಯುವ ಕಲಿಕೆ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಒತ್ತಡರಹಿತವಾಗಿ ಪರೀಕ್ಷೆಯನ್ನು ಎದುರಿಸಲು ಗಟ್ಟಿಯಾದ ಮನಸ್ಸು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲರಾದ ಈಶ್ವರಪ್ಪ, ಶಿಕ್ಷಣ ಸಂಯೋಜಕರಾದ ವಿ.ಟಿ. ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
✒️…ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









