ಮನೆ ಶಿವಮೊಗ್ಗ ಒಂದು ರಾತ್ರಿ ಕಾರೆಹೊಂಡ ವಾಸ್ತವ ಹೂಡಿದ:ಪಿಎಸ್ಐ ಪ್ರವೀಣ್

ಒಂದು ರಾತ್ರಿ ಕಾರೆಹೊಂಡ ವಾಸ್ತವ ಹೂಡಿದ:ಪಿಎಸ್ಐ ಪ್ರವೀಣ್

8
0

ಆನಂದಪುರ, ಮಾ.01:
ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣಕ್ಕೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಎಸ್‌.ಪಿ ಅವರು ತಿಳಿಸಿದರು.

ಅವರು ತಮ್ಮ ಠಾಣೆ ವ್ಯಾಪ್ತಿಯ ಕಾರೆಹೊಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ, ಬೆಳಿಗ್ಗೆ ಶಾಲಾ ಆವರಣದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಮಿಷನ್ ಸುರಕ್ಷಾ ಯೋಜನೆಯಡಿ ಜಾಗೃತಿ ಕಾರ್ಯಕ್ರಮ ನಡೆಸಿ ಮಾತನಾಡಿದರು.

ಬಾಲ್ಯ ವಿವಾಹವು ಮಕ್ಕಳ ಭವಿಷ್ಯವನ್ನು ಹಾಳುಮಾಡುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯಲು ಪೋಕ್ಸೋ ಕಾಯ್ದೆ ಜಾರಿಯಲ್ಲಿದ್ದು, ಯಾವುದೇ ಸಂಶಯಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಅವರ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ಕೈಯಲ್ಲಿ ಮದ್ಯಪಾನ ಅಥವಾ ತಂಬಾಕು ಉತ್ಪನ್ನಗಳನ್ನು ನೀಡುವುದು ತಪ್ಪು. ಇವುಗಳಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದರು.

ಗ್ರಾಮಸ್ಥರಾದ ಹರೀಶ್, ಉಮೇಶ್ ಹಾಗೂ ಗೌರಮ್ಮ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಯ ಇಂತಹ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ನಂತರ ಅಧಿಕಾರಿಗಳು ಗ್ರಾಮದ ಯುವಕರೊಂದಿಗೆ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡರು. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದುಷ್ಪ್ರವೃತ್ತಿಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಪಿ.ಎಸ್‌.ಐ ಪ್ರವೀಣ್ ಹೇಳಿದರು.

ಈ ಸಂದರ್ಭದಲ್ಲಿ ಉಳ್ಳೂರು ಪಂಚಾಯತ್ ಸದಸ್ಯರಾದ ತಿರುಮಲೇಶ್, ಹರೀಶ್, ಹುಚ್ಚರಾಯಪ್ಪ ಹಾಗೂ ಆನಂದಪುರ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ್ ಸೇರಿದಂತೆ ನಿಂಗರಾಜ್, ಪ್ರಶಾಂತ್, ಶಶಿಕುಮಾರ್, ಉಮೇಶ್, ನೂತನ್, ಮಾಲತೇಶ್, ನಿರಂಜನ್, ಹರ್ಷ ಮತ್ತು ಸತೀಶ್ ಉಪಸ್ಥಿತರಿದ್ದರು.

✒️.. ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t