ಮನೆ ಶಿವಮೊಗ್ಗ ಕಣ್ಣೂರಿನ ಮಾರಿಕಾಂಬ ಜಾತ್ರೆಗೆ ಅಂಕೆ ಹಾಕುವ ಶಾಸ್ತ್ರದ ಮೂಲಕ ವಿದ್ಯುಕ್ತ ಚಾಲನೆ..!!

ಕಣ್ಣೂರಿನ ಮಾರಿಕಾಂಬ ಜಾತ್ರೆಗೆ ಅಂಕೆ ಹಾಕುವ ಶಾಸ್ತ್ರದ ಮೂಲಕ ವಿದ್ಯುಕ್ತ ಚಾಲನೆ..!!

35
0

ಆನಂದಪುರ ಸಮೀಪದ ಕಣ್ಣೂರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ಧ ಮಾರಿಕಾಂಬ ಜಾತ್ರೆಗೆ ಅಂಕೆ ಹಾಕುವ ಶಾಸ್ತ್ರದ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಶಿವಪ್ಪ ಎಸ್ ಮಾತನಾಡಿ, ಕಣ್ಣೂರಿನ ಮಾರಿಕಾಂಬ ಜಾತ್ರೆ ಮಾರ್ಚ್ 9ರ ಸೋಮವಾರದಿಂದ ಪ್ರಾರಂಭವಾಗಿ ಮಾರ್ಚ್ 13ರ ಶುಕ್ರವಾರದವರೆಗೆ ನಡೆಯಲಿದೆ ಎಂದು ತಿಳಿಸಿದರು. ಅಂಕೆ ಹಾಕುವ ಶಾಸ್ತ್ರ ನಡೆದ ದಿನದಿಂದ ಜಾತ್ರೆ ಮುಗಿಯುವವರೆಗೂ ಊರಿನ ಜನರು ಬೇರೆ ಊರಿಗೆ ಹೋಗಬಾರದು ಎಂಬ ರೂಢಿ ಇದ್ದು, ಹೋಗಬೇಕಾದರೂ ಸಂಜೆ ವೇಳೆಗೆ ಮರಳಿ ಬರುವಂತೆ ಸಂಪ್ರದಾಯ ಇದೆ ಎಂದು ಹೇಳಿದರು.

ಕಣ್ಣೂರಿನ ಮಾರಿಕಾಂಬ ದೇವಸ್ಥಾನದ ಮುಂಭಾಗದಲ್ಲಿ ಅಂಕೆ ಹಾಕುವ ಶಾಸ್ತ್ರದೊಂದಿಗೆ ಆಸಾದಿಯವರಿಂದ ಹೊಗಳಿಕೆ ಹಾಕುವ ವಿಧಿವಿಧಾನ ನಡೆಯಿತು.
ಮಾರ್ಚ್ 9ರಿಂದ ಆರಂಭವಾಗುವ ಜಾತ್ರೆಯಲ್ಲಿ ಮಾರ್ಚ್ 10ರ ಮಂಗಳವಾರ ರಾತ್ರಿ 10 ಗಂಟೆಗೆ ತವರು ಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 11ರ ಬೆಳಗ್ಗೆ 4.30ಕ್ಕೆ ಮಾರಿಕಾಂಬಾ ದೇವಿಯ ರಥಾರೋಹಣ ನಡೆಯಲಿದ್ದು, ವಿವಿಧ ಕಲಾತಂಡಗಳೊಂದಿಗೆ ರಾಜಬೀದಿಯಲ್ಲಿ ರಥೋತ್ಸವ ಮೆರವಣಿಗೆ ಸಾಗಲಿದೆ. ಬಳಿಕ ಬೆಳಗ್ಗೆ 9 ಗಂಟೆಗೆ ಗದ್ದಿಗೆಯಲ್ಲಿ ಅಮ್ಮನವರ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಜಾತ್ರೆಯ ಅಂಗವಾಗಿ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೀರೇಶ್ವರ ಕಲಾ ಬಳಗ, ಸೂರನಗದ್ದೆ ಇವರಿಂದ “ಅತ್ತೆಗೊಂದು ಕಾಲ ಸೊಸೆಗೊಂದು ಕಾಲ” ನಾಟಕ, ಅಲಸೇಯ ಯಕ್ಷಗಾನ ಮಂಡಳಿಯವರಿಂದ “ಶ್ರೀ ದುರ್ಗಾ ಶಕ್ತಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜೊತೆಗೆ ಸ್ಥಳೀಯ ಕಲಾವಿದರಿಂದ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 13ರ ಶುಕ್ರವಾರ ಪೂಜಾ ವಿಧಿವಿಧಾನಗಳೊಂದಿಗೆ ರಾತ್ರಿ 10 ಗಂಟೆಗೆ ಶ್ರೀದೇವಿಯ ವಿಸರ್ಜನೆ ಕಾರ್ಯಕ್ರಮದ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಶಿವಪ್ಪ ಎಸ್ ತಿಳಿಸಿದರು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಉಪಾಧ್ಯಕ್ಷ ಭೀಮಪ್ಪ ಕೆ.ಆರ್., ರಘು ವಿ., ಕಾರ್ಯದರ್ಶಿ ನಾಗರಾಜ ಟಿ.ಡಿ., ಸಹಕಾರ್ಯದರ್ಶಿ ರವಿ ಕೆ.ಎಂ., ಸದಸ್ಯರಾದ ಮಂಜಪ್ಪ ಜೆ.ಸಿ., ಸಿದ್ದಪ್ಪ, ಸುರೇಶ, ಗಣಪತಪ್ಪ, ನಾಗರಾಜ ಸಂಗೀ, ಮಂಜುನಾಥ, ನಾರಾಯಣರಾವ್, ಲಿಂಗಪ್ಪ ನಿಚಡಿ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t