ಮನೆ Blog ಕೆಪಿಸಿ ಸಾಗುವಳಿ ಮಂಜೂರಾತಿಗೆ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ ನಾ ಶ್ರೀನಿವಾಸ್ ಆಗ್ರಹ..!!

ಕೆಪಿಸಿ ಸಾಗುವಳಿ ಮಂಜೂರಾತಿಗೆ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ ನಾ ಶ್ರೀನಿವಾಸ್ ಆಗ್ರಹ..!!

110
0

ಸಾಗರ:ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಿ ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ) ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸರ್ಕಾರ ತಕ್ಷಣ ಭೂ ಒಡೆತನ ನೀಡಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ ನಾ ಶ್ರೀನಿವಾಸ್ ಆಗ್ರಹಿಸಿದರು.

ಕರೂರು ಹೋಬಳಿಯ ತುಮರಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗುರುವಾರ ಮಲೆನಾಡಿನ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಕುರಿತು ಹೋರಾಟ ರೂಪುರೇಷೆ ಬಗ್ಗೆ ಅವರು ಮಾತನಾಡಿದರು.

ಭೂ ಸ್ವಾಧೀನ ಕಾಯ್ದೆ ಪ್ರಕಾರ ಯಾವುದೇ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡ 5ವರ್ಷದೊಳಗೆ ಅದರ ಮಾಲಿಕ ಅಥವಾ ಸರ್ಕಾರಕ್ಕೆ ಹಿಂದಿರುಗಿಸಬೇಕು. ಆದರೆ ಆಣೆಕಟ್ಟು ನಿರ್ಮಾಣವಾಗಿ 65 ವರ್ಷಗಳು ಕಳೆದರೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರದ ವಿಫಲ ಖಂಡಿಸಿ, ಅಕ್ಟೋಬರ್ 30ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಕರೂರು, ಬಾರಂಗಿ ಹೋಬಳಿಯ ಪ್ರದೇಶವನ್ನು ಶರಾವತಿ ಸಿಂಗಳೀಕ ಅಭಯಾರಣ್ಯವಾಗಿ ಘೋಷಿಸುವ ವೇಳೆ ಸ್ಥಳಿಯ ಗ್ರಾಮ ಪಂಚಾಯ್ತಿಗಳ ಅಭಿಪ್ರಾಯ ಪಡೆಯದೆ ಅಭಯಾರಣ್ಯ ವ್ಯಾಪ್ತಿಯೊಳಗೆ ತರಲಾಗಿದೆ.ಆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವುದು, ಊರು ಯಾವುದನ್ನೂ ಗಮನಿಸದರೆ ಕಚೇರಿಯಲ್ಲಿ ಕುಳಿತು ನಕ್ಷೆ ತಯಾರಿಸಲಾಗಿದೆ. ಇದರಿಂದ ಅರಣ್ಯ, ಕಂದಾಯ ಸಮಸ್ಯೆ ಉದ್ಭವಿಸಿದ್ದು 30 ವರ್ಷಗಳ ಹಿಂದೆ ಮಂಜೂರಾದ ಭೂಮಿಯನ್ನು ತೆರವು ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.ಇದರಿಂದ ಎರಡು–ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಅನ್ಯಾಯವಾಗಲಿದೆ ಕೆಪಿಸಿ ಸಾಗುವಳಿದಾರ ಬಿ ಆರ್ ಅಶೋಕ್ ಹೇಳಿದರು.

ಬಾನುಕುಳಿ ಗ್ರಾಮದ ಉರುಳುಗಲ್ಲು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗದ ಸರ್ಕಾರಗಳು ಪ್ರಭಾವಿ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿ ಕಡಿತ ಗೊಳಿಸಲು ಒಪ್ಪಿಗೆ ನೀಡಿರುವುದು ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರೈತರ ಮೇಲೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲಿಸಬಾರದು ಎಂದು ಹಲವು ಬಾರಿ ಸರ್ಕಾರ ನಿರ್ದೇಶನ ನೀಡಿದೆ. ಆದರೆ, ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪಾಲಿಸದೆ ನಿರಂತರವಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಹೆಚ್ಚುತ್ತಿದೆ.ಬಗರ್ ಹುಕುಂ ನಮೂನೆ 50, 53, 57ರಲ್ಲಿ ಅರ್ಜಿ ಹಾಕಿದವರು ಅರಣ್ಯ, ಗೋಮಾಳ, ಕಂದಾಯ ಭೂಮಿ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ‘ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಸಮಸ್ಯೆ ಪರಿಹಾರಕ್ಕೆ ಇಚ್ಛಾಶಕ್ತಿ ತೋರಬೇಕು ಈ ಮೂಲಕ ಇಲ್ಲಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಈ ವೇಳೆ ಅಶೋಕ್ ಜಂಬಳ್ಳಿ , ಲೋಕಣ್ಣ, ಅ ನಾ ಚಂದ್ರಶೇಖರ್, ಅಶೋಕ ಕೊಡಸರ, ಚಕ್ರಪಾಣಿ ಭಟ್, ಅರುಣ್ ಕರೂರು ಗ್ರಾಮಸ್ಥರು ಇದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ :https://chat.whatsapp.com/CnYYumPSez6AMYyw8cHG9A?mode=ac_t