ಮನೆ Blog ಕ್ಯಾನ್ಸರ್ ಮಹಾಮಾರಿಗೆ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಬಲಿ: ಕಾಗೋಡಿನ ಯುವಕನ ಕನಸು ನುಚ್ಚುನೂರು..!!

ಕ್ಯಾನ್ಸರ್ ಮಹಾಮಾರಿಗೆ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಬಲಿ: ಕಾಗೋಡಿನ ಯುವಕನ ಕನಸು ನುಚ್ಚುನೂರು..!!

3
0

✒️..ಅಮಿತ್ ಆರ್ ಆನಂದಪುರ

ಸಾಗರ: ಸರ್ಕಾರಿ ನೌಕರಿ ಪಡೆದು ಕುಟುಂಬಕ್ಕೆ ಆಸರೆಯಾಗಬೇಕೆಂಬ ಕನಸು ಹೊತ್ತಿದ್ದ ಸಾಗರ ತಾಲ್ಲೂಕಿನ ಕಾಗೋಡಿನ ಯುವಕನೊಬ್ಬ ರಕ್ತದ ಕ್ಯಾನ್ಸರ್ (Blood Cancer) ಎನ್ನುವ ಮಹಾಮಾರಿಗೆ ಬಲಿಯಾಗಿದ್ದಾರೆ.

ಸಾಗರ ತಾಲ್ಲೂಕಿನ ಕಾಗೋಡು ನಿವಾಸಿ ಸಚಿನ್ (26) ಮೃತಪಟ್ಟ ದುರ್ದೈವಿ. ಇವರು ಕೆರಿಯಪ್ಪ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರರಾಗಿದ್ದಾರೆ.

ಹೋರಾಟದ ಹಾದಿಯಲ್ಲಿದ್ದ ಯುವಕ:

ಮೃತ ಸಚಿನ್ ಅವರು ಕಳೆದ ಕೆಲವು ಸಮಯದಿಂದ ಶಿವಮೊಗ್ಗದಲ್ಲಿ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಠಿಣ ಪರಿಶ್ರಮದೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಅವರು, ಉತ್ತಮ ಭವಿಷ್ಯದ ಕನಸು ಕಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.

ಒಂದೂವರೆ ತಿಂಗಳ ಹೋರಾಟ:

ಕಳೆದ ಒಂದೂವರೆ ತಿಂಗಳ ಹಿಂದೆ ಸಚಿನ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ತಪಾಸಣೆಯ ವೇಳೆ ಅವರಿಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರದಂದು ವೈದ್ಯರು “ಕ್ಯಾನ್ಸರ್ ಕೊನೆಯ ಹಂತ ತಲುಪಿದ್ದು, ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ” ಎಂದು ತಿಳಿಸಿದ್ದರು.

ವೈದ್ಯರ ಸಲಹೆಯಂತೆ ಕುಟುಂಬಸ್ಥರು ಶುಕ್ರವಾರ ಸಂಜೆ ಸಚಿನ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದಿದ್ದರು. ಆದರೆ ಮನೆ ತಲುಪಿದ ಕೆಲವೇ ಕ್ಷಣಗಳಲ್ಲಿ ಸಚಿನ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಕಂಬನಿ:

ಬಡತನದ ನಡುವೆಯೂ ಓದಿ ಮೇಲೆ ಬರಬೇಕೆಂಬ ಹಂಬಲ ಹೊಂದಿದ್ದ ಯುವಕನ ಅಕಾಲಿಕ ನಿಧನದಿಂದ ಕಾಗೋಡು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರತಿಭಾನ್ವಿತ ಯುವಕನ ಸಾವಿಗೆ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t