ಆನಂದಪುರ: ನ-5/ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಹೇಳಿದರು.
ಅವರು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆದ ಶಾಲೆಯಲ್ಲಿ ಓದುತ್ತಿರುವ ಬಾಲ ವಿಜ್ಞಾನಿ ಮಿಥುನ್ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ ಅಂತಹ ಪ್ರತಿಭೆಯನ್ನು ಗುರುತಿಸುವ ಕೆಲಸ ಆಗಬೇಕಾಗಿದೆ, ಮೊಬೈಲ್ ಹಿಂದೆ ಮಕ್ಕಳು, ಮಕ್ಕಳ ಹಿಂದೆ ಪೋಷಕರು ಸಾಗುತ್ತಿರುವುದು ಬೇಸರದ ಸಂಗತಿ. ಮಕ್ಕಳಲ್ಲಿ ಓದುವ, ಬರೆಯುವ, ಸಂಶೋಧನಾ ಮನಸ್ಥಿತಿ ದೂರವಾಗಿದೆ, ಬರಿ ಅಂಕಗಳ ಬೆನ್ನು ಹತ್ತಿರುವುದು ಮಕ್ಕಳ ಮನೋ ಸ್ಥೀಮಿತ ಕಳೆದುಕೊಳ್ಳುವಂತಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮೌಢ್ಯ ಕ್ಕೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ, ಮೌಲ್ಯಗಳ ಬದುಕು ಕಾಣದಾಗಿದೆ, ಸಂಸ್ಕೃತಿ, ಸಂಸ್ಕಾರ ಕಳೆದು ಹೋಗುತ್ತಿದೆ, ಮಕ್ಕಳು ತಮ್ಮ ಗುರಿಯನ್ನು ಗುರುತಿಸಿಕೊಂಡು ಉನ್ನತ ಮಟ್ಟದಲ್ಲಿ ಬೆಳೆಯಬೇಕು, ಕಲೆ, ಸಾಹಿತ್ಯ , ಸಂಗೀತ, ವಿಜ್ಞಾನ ಕ್ರೀಡೆ ಮೊದಲಾದ ಹವ್ಯಾಸಗಳನ್ನು ರೂಪಿಸಬೇಕು ಅದಕ್ಕೆ ಪೋಷಕರು ಶಿಕ್ಷಕರು ಸದಾ ಬೆನ್ನೆಲುಬಾಗಿ ನಿಲ್ಲುವಂತಾಗಬೇಕು ಎಂದರು.
ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ಮಾತನಾಡಿ ಮಕ್ಕಳಲ್ಲಿ ವಿಜ್ಞಾನದ ಅವಿಷ್ಕಾರ ಬೆಳೆಸಬೇಕು, ಒಳ್ಳೆಯ ಮನಸ್ಸಿನಿಂದ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ, ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವುದು ಪ್ರತಿಯೊಬ್ಬ ನಾಗರೀಕನ ಕೆಲಸ ಆಗಬೇಕಾಗಿದೆ, ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದೆ, ನಮ್ಮೂರಿನ ಪ್ರತಿಭೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಈಶ್ವರಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು, ವೇದಿಕೆಯಲ್ಲಿ ಪ್ರಮುಖರಾದ ಗಣಪತಿ ಯಡೇಹಳ್ಳಿ, ಎಸ್.ಡಿ.ಎಂ.ಸಿ ಸದಸ್ಯರಾದ ಜಗನ್ನಾಥ ಆರ್, ಉಮೇಶ್ ಎನ್, ಪೋಷಕರಾದ ಗಾಯತ್ರಿ,ಮಂಜುನಾಥ, ಶಿಕ್ಷಕರಾದ ನಟರಾಜ್, ಶ್ರೀನಿವಾಸ ಜಿ, ಪ್ರದೀಪ ಉಪಸ್ಥಿತರಿದ್ದರು.
ಅಕ್ಟೋಬರ್ 1ರಿಂದ9ರವರೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರದ ಸ್ಕೌಟ್ ಕ್ಯಾಂಪ್ ಬೆಸೆಂಟ್ ಸಭಾಂಗಣದಲ್ಲಿ ನಡೆದ ವಿಶ್ವ ದಾಖಲೆಯ ಏಷ್ಯ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ರಾಜ್ಯಮಟ್ಟದ ಟೆಲಿಸ್ಕೋಪ್ ತಯಾರಿಕೆ ಕಾರ್ಯಾಗಾರದಲ್ಲಿ ಆನಂದಪುರ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಮಿಥುನ್ ಕುಮಾರ್ ಭಾಗವಹಿಸಿ ರಾಜ್ಯ ಪಾಲರಿಂದ ಪ್ರಶಸ್ತಿ ಪಡೆದ ವಿದ್ಯಾರ್ಥಿಯಾಗಿರುವುದು ವಿಶೇಷ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









