ಮನೆ Blog ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

39
0

ಆನಂದಪುರ: ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಕಡ್ಡಾಯವಾಗಿ ಸಿಗಬೇಕು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿ ವಂಚಿತರಾಗುವುದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಅವರು ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೂ ಬಿಸಿ ಊಟದ ಸೌಲಭ್ಯ ಒದಗಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವ ಮೂಲಕ ತಂದೆ-ತಾಯಿಯರ ಆಸೆಗಳನ್ನು ಈಡೇರಿಸುವ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ನನ್ನೊಂದಿಗೆ ಹಂಚಿಕೊಳ್ಳಿ; ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಕುನುಗೋಡು ಮಾತನಾಡಿ, “ಅಸಾಧ್ಯವೆಂಬುದು ಯಾವುದೂ ಇಲ್ಲ. ಎಲ್ಲವನ್ನೂ ಸಾಧಿಸಲು ಸಾಧ್ಯ. ದೊಡ್ಡ ಕನಸುಗಳನ್ನು ಕಂಡು ದೃಢ ಗುರಿಯೊಂದಿಗೆ ಶ್ರಮಿಸಿದರೆ ಯಶಸ್ಸು ನಿಮ್ಮ ಹಿಂದೆ ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಸುಮ್ಮನೆ ಕಾಲಹರಣ ಮಾಡಬೇಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ರೀತಿಯ ಶಕ್ತಿ ಇದೆ, ಅದನ್ನು ಹೊರಹಾಕಲು ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರವಿಶಂಕರ್ ಎನ್. ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ ಎಂ., ಜಗನ್ನಾಥ್, ಬಿ.ಡಿ. ರವಿಕುಮಾರ್, ಉಮೇಶ್ ಎನ್., ರಂಗನಾಥ್, ದೇವೇಂದ್ರ, ಜಗದೀಶ್, ಮಮತಾ, ಗ್ರಾಮ ಪಂಚಾಯತ್ ಸದಸ್ಯರಾದ ಗಜೇಂದ್ರ ಯಾದವ್, ಸಿರಿಜಾನ್, ಲಲಿತಮ್ಮ, ನವೀನ, ಉಪಪ್ರಾಚಾರ್ಯ ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ, ಕ್ರೀಡಾ ಹಾಗೂ ಸಾಂಸ್ಕೃತಿಕ ಪುರಸ್ಕಾರಗಳನ್ನು ನೀಡಿ, ಬಹುಮಾನವನ್ನು ವಿತರಿಸಿದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ;https://chat.whatsapp.com/IY9pAkaWjY80mynFTlPYHJ