Home Blog ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ: ಸಾರ್ವಜನಿಕರ ಸಹಕಾರಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ ಆರ್...

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ: ಸಾರ್ವಜನಿಕರ ಸಹಕಾರಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಮನವಿ..!!

34
0

✒️ಅಮಿತ್ ಆರ್ ಆನಂದಪುರ

ಆನಂದಪುರ(ಸಾಗರ): ತಾಲ್ಲೂಕಿನಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗದೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಮನವಿ ಮಾಡಿದರು.

ಅವರು ಬುಧವಾರ ಆನಂದಪುರ ನಾಡಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಬಿಎಲ್‌ಒಗಳಿಗೆ ಸೂಕ್ತ ನಿರ್ದೇಶನ ನೀಡಿ ಮಾತನಾಡಿ ಸಾಗರ ತಾಲೂಕಿನಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಹಾಗೂ ಅಗತ್ಯ ತಿದ್ದುಪಡಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಬಿಎಲ್‌ಒಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.

ಮತದಾರರು ಸಾಮಾನ್ಯವಾಗಿ ಬೆಳಗಿನ ಅವಧಿಯಲ್ಲಿ ಹಾಗೂ ಸಂಜೆ 5 ಗಂಟೆಯ ನಂತರ ಮನೆಗಳಲ್ಲಿ ಲಭ್ಯವಿರುವುದರಿಂದ, ಬಿಎಲ್‌ಒಗಳು ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ನಿಗದಿತ ಕರ್ತವ್ಯದ ಅವಧಿಯನ್ನು ಮೀರಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಬೇಕಿರುವುದರಿಂದ ಸಾರ್ವಜನಿಕರು ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

ಮತದಾರರಿಗೆ ಮಾಹಿತಿ ಕೊರತೆ ಉಂಟಾಗದಂತೆ ಮತದಾರರ ಸೌಲಭ್ಯ ಕೇಂದ್ರಗಳು (Voter Facilitation Centres) ಕಾರ್ಯನಿರ್ವಹಿಸುತ್ತಿವೆ. ಬಿಎಲ್‌ಒಗಳಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ಅವರ ಕಾರ್ಯವನ್ನು ಸೂಪರ್‌ವೈಸರ್‌ಗಳು, ಕಂದಾಯ ನಿರೀಕ್ಷಕರು (ಆರ್‌ಐ) ಹಾಗೂ ಸಂಬಂಧಿತ ಅಧಿಕಾರಿಗಳ ತಂಡ ಮೇಲ್ವಿಚಾರಣೆ ಮಾಡುತ್ತಿದೆ. ಯಾವುದೇ ಸಮಸ್ಯೆ ಎದುರಾದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬಹುದು. ಬಿಎಲ್‌ಒಗಳು ಮನೆಗೆ ಭೇಟಿ ನೀಡಿದ ವೇಳೆ ಅಗತ್ಯ ಮಾಹಿತಿ ನೀಡಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ.

ಹೆಸರು, ವಿಳಾಸ ಅಥವಾ ಇತರೆ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಫಾರ್ಮ್-8 ಮೂಲಕ ಅರ್ಜಿ ಸಲ್ಲಿಸಿ, ಚುನಾವಣಾ ಆಯೋಗ ಸೂಚಿಸಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಅಗತ್ಯವಾದ ತಾಂತ್ರಿಕ ಸೌಲಭ್ಯಗಳನ್ನು ತಾಲ್ಲೂಕಿನ ಎಲ್ಲ ನಾಡಕಚೇರಿಗಳು ಹಾಗೂ ಮತದಾರರ ಸೌಲಭ್ಯ ಕೇಂದ್ರಗಳಲ್ಲಿ ಒದಗಿಸಲಾಗಿದೆ. ವೈ-ಫೈ, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಉಪತಾಶಿಲ್ದಾರ್ ಶಾಂತಮೂರ್ತಿ ಮಾತನಾಡಿ, ತಾಲ್ಲೂಕಿನ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಬಿಎಲ್‌ಒಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಕೂಡ ಅಗತ್ಯ ದಾಖಲೆಗಳನ್ನು ಒದಗಿಸಿ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರಾದ ಕವಿರಾಜ್, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ವಾಣಿಶ್ರೀ, ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಬಿಎಲ್‌ಒಗಳು ಉಪಸ್ಥಿತರಿದ್ದರು.

ಜಾಹೀರಾತು