ಮನೆ ಶಿವಮೊಗ್ಗ ಮಹಾವೀರರ ಆದರ್ಶ ಮನುಕುಲಕ್ಕೆ ಮಾರ್ಗದರ್ಶನ ಶಾಸಕ ಎಸ್.ಎನ್. ಚನ್ನಬಸಪ್ಪ..!!

ಮಹಾವೀರರ ಆದರ್ಶ ಮನುಕುಲಕ್ಕೆ ಮಾರ್ಗದರ್ಶನ ಶಾಸಕ ಎಸ್.ಎನ್. ಚನ್ನಬಸಪ್ಪ..!!

17
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ (ಮಾ. 30): ಭಗವಾನ್ ಮಹಾವೀರರ ಆದರ್ಶಗಳು ಇಡೀ ಮನುಕುಲಕ್ಕೆ ಮಾರ್ಗದರ್ಶಕವಾಗಿದ್ದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತಿ ಹಾಗೂ ನೆಮ್ಮದಿ ದೊರೆಯಲು ಸಾಧ್ಯ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ‘ಭಗವಾನ್ ಮಹಾವೀರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

“ಮಹಾವೀರರು ರಾಜವೈಭವದ ಸುಖ-ಭೋಗಗಳನ್ನು ತ್ಯಜಿಸಿ ತೀರ್ಥಂಕರರಾದರು. ಅವರ ಜೀವನವೇ ನಮಗೆಲ್ಲ ದೊಡ್ಡ ಸ್ಪೂರ್ತಿ. ಭಾರತದ ಭವ್ಯ ಪರಂಪರೆಯಲ್ಲಿ ಜೈನ ಧರ್ಮದ ವಿಚಾರಧಾರೆಗಳು ಮಹತ್ವದ್ದಾಗಿದ್ದು, ಜಗದ ಜನರು ಈ ತತ್ವಗಳನ್ನು ಅರಿತು ಪರಸ್ಪರ ಪ್ರೀತಿಯಿಂದ ಬಾಳಬೇಕು,” ಎಂದು ಆಶಯ ವ್ಯಕ್ತಪಡಿಸಿದರು.

ಸಾಹಿತಿ ಸಾಗರದ ವಿ.ಟಿ. ಸ್ವಾಮಿ
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ ಮಾತನಾಡಿ, “ಜಗತ್ತಿನಲ್ಲಿ ಶಾಂತಿ ನೆಲೆಸಲು ಅಹಿಂಸಾ ತತ್ವವೊಂದೇ ದಾರಿ. ಮಹಾವೀರರು ಸಾರಿದ ಪಂಚ ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇಂದಿಗೂ ಸಾರ್ವಕಾಲಿಕವಾಗಿವೆ,” ಎಂದರು.

“ಮಹಾವೀರರ ವಿಚಾರಗಳು ಕೇವಲ ಮೆದುಳಿನಲ್ಲಿದ್ದರೆ ಸಾಲದು, ಅವು ಹೃದಯಕ್ಕೆ ಇಳಿಯಬೇಕು. ‘ಬದುಕು ಮತ್ತು ಬದುಕಲು ಬಿಡು’ ಎಂಬ ಸರಳ ಮಂತ್ರವನ್ನು ಪಾಲಿಸಿದರೆ ಜಗತ್ತಿನ ಅರ್ಧದಷ್ಟು ಸಮಸ್ಯೆಗಳು ನೀಗುತ್ತವೆ,” ಎಂದು ಅವರು ಅಭಿಪ್ರಾಯಪಟ್ಟರು.

ಜೀವನದ ಸರಳತೆ, ಹಾಗೂ ಆತ್ಮ ಸಾಕ್ಷಾತ್ಕಾರದ ಕುರಿತು ಮಹಾವೀರರು ನೀಡಿದ ಸಂದೇಶಗಳು ಮನುಕುಲದ ಒಳಿತಿಗಾಗಿ ಇವೆ ಎಂದು ಅವರು ವಿವರಿಸಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹಾಲಾಡಿ, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಜಯರಾಜ್ ಪಾಂಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t