ಸಾಗರ: ‘ಮಾದಕ ವಸ್ತು ತ್ಯಜಿಸಿ ಸುಖ ಜೀವನ ನಡೆಸಿ’ ಎನ್ನುವ ಘೋಷವಾಕ್ಯ ಯುವ ಸಮೂಹ ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ, ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ.ಎಸ್. ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ * ನಶಮುಕ್ತ ಭಾರತ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತು ಬೆಂಕಿಯ ಜ್ವಾಲೆ ಇದ್ದಂತೆ. ಒಮ್ಮೆ ಮಾದಕ ವಸ್ತುವಿಗೆ ದಾಸರಾದರೆ ಅದರಿಂದ ಹೊರಗೆ ಬರುವುದು ಕಷ್ಟಸಾಧ್ಯ. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು ಸುಂದರ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಸಾಗರ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಮಾತನಾಡಿ ಯುವ ಸಮೂಹ ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡಿರುತ್ತದೆ. ಆದರೆ, ಬಾಹ್ಯಾಕರ್ಷಣೆ ಕೆಲವೊಮ್ಮೆ ನಿಮ್ಮನ್ನು ದಿಕ್ಕು ತಪ್ಪಿಸಿ, ಭವಿಷ್ಯದ ಕನಸು ನುಚ್ಚುನೂರು ಮಾಡುತ್ತದೆ. ಅದರಲ್ಲಿ ಮಾದಕ ವಸ್ತು ಸೇವನೆ ಸಹ ಒಂದಾಗಿದೆ. ಮಾದಕವಸ್ತು ಸೇವನೆ ಮಾಡಿದ ವ್ಯಕ್ತಿ ಏನು ಮಾಡುತ್ತೇನೆ ಎನ್ನುವುದನ್ನು ಮರೆತು ವರ್ತಿಸುತ್ತಾನೆ. ನಿಮ್ಮ ಮೇಲೆ ನಿರೀಕ್ಷೆ ಇರಿಸಿಕೊಂಡ ತಂದೆತಾಯಿ ಕುಟುಂಬದ ಕನಸು ನನಸು ಮಾಡುವತ್ತ ಗಮನ ಹರಿಸಿ. ನಶೆಯಿಂದ ದೂರವಿದ್ದು, ಉತ್ತಮ ಪ್ರಜೆಗಳಾಗಿ ಬದುಕಿ ಎಂದು ಮಾರ್ಗದರ್ಶನ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಸಣ್ಣಹನುಮಪ್ಪ ಜಿ. ಮಾತನಾಡಿ ಸಮಾಜದಲ್ಲಿ ವಿದ್ಯಾವಂತರೆ ಹೆಚ್ಚಿನ ಸಂಖ್ಯೆಯಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ದುಶ್ಚಟಗಳಿಗೆ ದಾಸರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇರುವ ಸಮಯವನ್ನು ವ್ಯರ್ಥ ಮಾಡದೆ ಮತ್ತು ಯಾವುದೇ ದುಶ್ಚಟಗಳಿಗೆ ದಾಸರಾಗದೆ ಓದಿನ ಕಡೆ ಗಮನಹರಿಸಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುವರ್ಣ ನಾಯ್ಕ್,ಪ್ರೊ. ಮೇಘಾ ಭೂತೆ, ಪ್ರೊ .ಡಾ. ಮಮತಾ ಹೆಗಡೆ, ಪ್ರೊ.ಕಿರಣ್ ತೆಲುಗಾರ, ಶಶಿಧರ, ವಕೀಲರಾದ ಶರಾವತಿ ಇನ್ನಿತರರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









