✒️ಅಮಿತ್ ಆರ್ ಆನಂದಪುರ
ರಿಪ್ಪನ್ ಪೇಟೆ: ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಗ್ರಾಮದ ಸರ್ವೆ ನಂ. 60ರಲ್ಲಿ ಕೃಷಿ ಮಾಡುತ್ತಿದ್ದ ಬಡ ರೈತರಾದ ಷಣ್ಮುಖಪ್ಪ ಬಿನ್ ಕೃಷ್ಣಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಈ ಅವಘಡ ಸಂಭವಿಸಿದೆ. ಸುಮಾರು 2 ಎಕರೆ ಪ್ರದೇಶದಲ್ಲಿ ಉತ್ತಮವಾಗಿ ಬೆಳೆದಿದ್ದ ಕಬ್ಬಿನಲ್ಲಿ ಸುಮಾರು 1.5 ಎಕರೆ ಭಾಗ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಬೆಂಕಿಯಿಂದ ಕಬ್ಬು ಬೆಳೆ ಹಾಗೂ ಬೀಜದ ಕಬ್ಬು ನಾಶವಾಗಿರುವುದರಿಂದ ರೈತನಿಗೆ ಭಾರೀ ನಷ್ಟ ಉಂಟಾಗಿದೆ. ಪ್ರಾಥಮಿಕ ಅಂದಾಜು ಪ್ರಕಾರ 4ರಿಂದ 5 ಲಕ್ಷ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ ಸುಮಾರು 1.30 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ರೈತರು ತಕ್ಷಣವೇ ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ವೇಗವಾಗಿ ವ್ಯಾಪಿಸಿದ ಕಾರಣ ಹೆಚ್ಚಿನ ಪ್ರಮಾಣದ ಬೆಳೆ ಹಾನಿಯಾಗಿದೆ.

ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಿದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









