ಮನೆ ಶಿವಮೊಗ್ಗ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆ, ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ದಿಡೀರ್ ಭೇಟಿ – ವ್ಯವಸ್ಥೆಗಳ ಪರಿಶೀಲನೆ..!!

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆ, ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ದಿಡೀರ್ ಭೇಟಿ – ವ್ಯವಸ್ಥೆಗಳ ಪರಿಶೀಲನೆ..!!

3
0

✒️..ಅಮಿತ್ ಆರ್ ಆನಂದಪುರ

ರಿಪ್ಪನ್ ಪೇಟೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಂಗಳವಾರ ರಿಪ್ಪನ್ ಪೇಟೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರನೆ ಭೇಟಿ ನೀಡಿ, ಮೂಲಸೌಕರ್ಯ ಹಾಗೂ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಿದರು.

ಮೊದಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯ ಸ್ವಚ್ಛತೆ, ಔಷಧಗಳ ದಾಸ್ತಾನು ಮತ್ತು ಹಾಜರಾತಿ ಪುಸ್ತಕವನ್ನು ತಪಾಸಣೆ ನಡೆಸಿದರು. ರೋಗಿಗಳಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಔಷಧಗಳ ಲಭ್ಯತೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂದು ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಮೆಚ್ಚುಗೆ:
ನಂತರ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದಾಗ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಡಿಸಿ ಎದುರು ಹಂಚಿಕೊಂಡರು.

“ನಾನು ನಿಮ್ಮಂತೆಯೇ ಐಎಎಸ್ ಅಧಿಕಾರಿಯಾಗುತ್ತೇನೆ” ಎಂದು ವಿದ್ಯಾರ್ಥಿಯೊಬ್ಬ ಆತ್ಮವಿಶ್ವಾಸದಿಂದ ಹೇಳಿದಾಗ ಜಿಲ್ಲಾಧಿಕಾರಿಗಳು ಸಂತಸಗೊಂಡರು.

ಮತ್ತೊಬ್ಬ ವಿದ್ಯಾರ್ಥಿ ಎಲೆಕ್ಟ್ರಾನಿಕ್ ಇಂಜಿನಿಯರ್ ಹಾಗೂ ಇನ್ನೊಬ್ಬ ಪೊಲೀಸ್ ಅಧಿಕಾರಿ ಆಗುವ ಆಸೆ ವ್ಯಕ್ತಪಡಿಸಿ ಗಮನ ಸೆಳೆದರು.

ವಿದ್ಯಾರ್ಥಿ ನಿಲಯದ ಅಡುಗೆ ಮನೆ, ದಾಸ್ತಾನು ಕೊಠಡಿ ಹಾಗೂ ಭೋಜನಾಲಯವನ್ನು ವೀಕ್ಷಿಸಿದ ಅವರು, ಆಹಾರದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ವಾರ್ಡನ್‌ಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಭರತ್ ರಾಜ್, ಶಿರಸ್ತೇದಾರ್ ಸುಧೀರ್ ಕುಮಾರ್, ರಾಜಸ್ವ ನಿರೀಕ್ಷಕ ಸೈಯದ್ ಅಪ್ರೋಜ್, ವಿಎ ಮಂಜುನಾಥ್ ಹಾಗೂ ಪ್ರವೀಣ್ ಸೇರಿದಂತೆ ಹಲವು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t