ಮನೆ Blog ವಿಕೋಪಕ್ಕೆ ತಿರುಗಿದ ಕಬ್ಬು ಹೋರಾಟ…/140ಕ್ಕೂ ಹೆಚ್ಚು ಕಬ್ಬಿನ ಟ್ಯಾಕ್ಟರ್‌ಗಳಿಗೆ ಬೆಂಕಿ

ವಿಕೋಪಕ್ಕೆ ತಿರುಗಿದ ಕಬ್ಬು ಹೋರಾಟ…/140ಕ್ಕೂ ಹೆಚ್ಚು ಕಬ್ಬಿನ ಟ್ಯಾಕ್ಟರ್‌ಗಳಿಗೆ ಬೆಂಕಿ

64
0

ಬಾಗಲಕೋಟೆ : ಪ್ರತಿಟನ್ ಕಬ್ಬಿಗೆ 3500 ದರ ನೀಡುವಂತೆರೈತರು ನಡೆಸುತ್ತಿರುವ ಹೋರಾಟ, ಗುರುವಾರ ರಾತ್ರಿ ವಿಕೋಪಕ್ಕೆ ತಿರುಗಿದೆ. ರೈತರ ಖಡಕ್ ಎಚ್ಚರಿಕೆ ಮಧ್ಯೆಯೂ ಕಬ್ಬು ನುರಿಸುವ ಹಂಗಾಮು ಆರಂಭಿಸಿದ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಶುಗರ್ಸ ಆವರಣದಲ್ಲಿ ನಿಂತಿದ್ದ 140ಕ್ಕೂ ಹೆಚ್ಚು ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟ, ಗುರುವಾರ ರಾತ್ರಿ ಮತ್ತಷ್ಟು ಬಿಗಡಾಯಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಸಮೀರವಾಡಿಯ ಗೋದಾವರಿ ಶುಗರ್ಸ ಆವರಣದಲ್ಲಿ ಕಬ್ಬು ತುಂಬಿಕೊಂಡಿದ್ದ ನಿಂತಿದ್ದ 140ಕ್ಕೂ ಹೆಚ್ಚು ಟ್ಯಾಕ್ಟ‌ರ್, ಲಾರಿಗಳಿಗೆ ಹೆಚ್ಚಲಾಗಿದೆ. ಕಳೆದೊಂದು ವಾರದಿಂದ ಮುಧೋಳದಲ್ಲೇ ಬೀಡುಬಿಟ್ಟು, ಜಿಲ್ಲಾಡಳಿತ ಮತ್ತು ರೈತರೊಂದಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಜತೆಗೆ ಕಾನೂನು ಸೂವ್ಯವಸ್ಥೆಯ ಉಸ್ತುವಾರಿ ಹೊತ್ತು ಕೆಲಸ ಮಾಡುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಮಹಾಂತೇಶ್ವರ ಜಿದ್ದಿ ಅವರ ಮೇಲೂ ಕಲ್ಲು ಎಸೆಯಲಾಗಿದೆ.

ದೊಡ್ಡ ಕಲ್ಲನ್ನುಕಾಲಿನ ಮೇಲೆ ಎತ್ತಿ ಹಾಕಿದ್ದು, ತೊಡೆಯ ಭಾಗದ ಮೂಳೆ ಮುರಿತವಾಗಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಮಹಾಲಿಂಗಪುರದ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಬಾಗಲಕೋಟೆ ಕರೆತಂದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಒಂದು ಪೊಲೀಸ್ ಜೀಪ್‌ಗೆ ಕಲ್ಲು ಎಸೆದಿದ್ದು, 8ರಿಂದ 10 ಬೈಕ್‌ಗೆ ಬೆಂಕಿ ಹಚ್ಚಲಾಗಿದೆ.

ರೈತರಿಂದಲೇ ರೈತರ ಕಬ್ಬಿಗೆ ಬೆಂಕಿ :

ಗುರುವಾರ ಮುಧೋಳ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ರೈತರು, ನಾಳೆಯ ಹೋರಾಟದ ಕುರಿತು ಚರ್ಚಿಸಲು ಸಂಜೆ ಸಭೆ ಸೇರಲಿದ್ದರು. ಅಷ್ಟೊತ್ತಿಗೆ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ, ರೈತರ ಎಚ್ಚರಿಕೆಯ ಮಧ್ಯೆಯೂ ಕಬ್ಬು ನುರಿಸುವುದನ್ನು ಗುರುವಾರ ಬೆಳಗ್ಗೆ ಆರಂಭಿಸಿರುವುದು ಗೊತ್ತಾಗಿದೆ. ಆಗ ಬೈಕ್ ಮೇಲೆ ಸಮೀರವಾಡಿಯತ್ತ ಧಾವಿಸಿದ, ಮುಧೋಳದ ನೂರಾರು ರೈತರು, ದಾರಿಯಲ್ಲಿ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಎರಡು ಟ್ಯಾಕ್ಟರ್ ಪಲ್ಟಿ ಮಾಡಿ, ಬೆಂಕಿ ಹಚ್ಚಿದ್ದರು.

ನಂತರ ಕಾರ್ಖಾನೆ ಆವರಣಕ್ಕೆ ತೆರಳಿ, ಆವರಣದಲ್ಲಿದ್ದ 140ರಿಂದ 200 ಟ್ಯಾಕ್ಟರ್ ನಿಂತಿದ್ದವು. ಏಕಾಏಕಿ ಧಾವಿಸಿದ ರೈತರು, ಕಬ್ಬು ತುಂಬಿದ್ದ ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲು ಆರಂಭಿಸಿದ್ದಾರೆ. ಒಂದೊಂದು ಟ್ಯಾಕ್ಟರ್‌ಗಳು, ಒಂದೊಂದಕ್ಕೊಂದು ಅಕ್ಕ-ಪಕ್ಕ ನಿಲ್ಲಿಸಿದ್ದು, ಆರಂಭದಲ್ಲಿ 25ಕ್ಕೂ ಹೆಚ್ಚು ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದರು. ಅದು ಇನ್ನುಳಿದ ಟ್ಯಾಕ್ಟರ್‌ಗಳಿಗೂ ವ್ಯಾಪಿಸಿದ್ದು, ಸುಮಾರು 140ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ಯಾಕ್ಟರ್‌ಳಿಗೆ ಬೆಂಕಿ ವ್ಯಾಪಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಕೋಪಕ್ಕೆ ತಿರುಗಿದ್ದು ಏಕೆ :

ಸಮೀರವಾಡಿಯ ಗೋದಾವರಿ ಶುಗರ್ಸ, ರೈತರಿಗೆ ಬಾಕಿ ಕೊಡಬೇಕಿದ್ದು, ಈ ವರ್ಷ ಪ್ರತಿಟನ್ ಕಬ್ಬಿಗೆ 3500 ದರ ಘೋಷಿಸಿದ ಬಳಿಕ ಕಬ್ಬು ನುರಿಸುವುದನ್ನು ಆರಂಭಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೂ, ಗುರುವಾರ ಬೆಳಗ್ಗೆ ಕಬ್ಬು ನುರಿಸುವುದನ್ನು ಆರಂಭಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಮುಧೋಳದ ರೈತರು, ಕಾರ್ಖಾನೆ ಆವರಣಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ರೈತರ ವಿರುದ್ಧವೇ ತಿರುಗಿಬಿದ್ದ ರೈತರು :

ಸಮೀರವಾಡಿಯ ಗೋದಾವರಿ ಶುಗರ್ಸ ಆವರಣದಲ್ಲಿ ಕಬ್ಬು ತುಂಬಿದ್ದ ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಕ್ಕೆ, ಮಹಾಲಿಂಗಪುರ ಭಾಗದ ಹಾಗೂ ಈ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕಬ್ಬು ಕಳುಹಿಸಿದ್ದ ರೈತರು, ಟ್ಯಾಕ್ಟರ್ ಮಾಲಿಕರು, ಚಾಲಕರು ಕಣ್ಣೀರು ಹಾಕುತ್ತಿದ್ದಾರೆ. ಮುಧೋಳ ಭಾಗದ ರೈತರು ಎಂದು ಹೇಳಿಕೊಂಡು, ಏಕಾಏಕಿ ಬೆಂಕಿ ಹಚ್ಚಿದ್ದಾರೆ. ಅವರು ನಿಜವಾದ ರೈತರೇ ಆಗಿದ್ದರೆ, ಕಾರ್ಖಾನೆ ಮಾಲಿಕರೊಂದಿಗೆ ಜಗಳ ತಗೆಯಬೇಕಿದ್ದು, ದರ ನಿಗದಿಗೆ ಅವರೊಂದಿಗೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ನಾವು ಕಷ್ಟಪಟ್ಟು ಬೆಳೆದ ಕಬ್ಬು ಹಾಗೂ ಸಾಲ ಮಾಡಿ ಖರೀದಿಸಿದ್ದ ಟ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಕ್ಕೆ ಮುಧೋಳದ ರೈತರೇ ಪರಿಹಾರ ಕೊಡಬೇಕು. ಇಲ್ಲವೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವೂ ಪ್ರತಿಭಟನೆಯ ಹಾದಿ ನೋಡಬೇಕಾಗುತ್ತದೆ ಎಂದು ಗೋದಾವರಿ ಶುಗರ್ಸಗೆ ಕಬ್ಬು ಪೂರೈಸುವ ರೈತರು ಎಚ್ಚರಿಕೆ ನೀಡಿದ್ದಾರೆ.

ಮೂರು ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

ಈ ಘಟನೆ ಹಿನ್ನೆಲೆಯಲ್ಲಿ ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ನವೆಂಬ‌ರ್ 16ರ ಬೆಳಗ್ಗೆ 8ರ ವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಆದೇಶಿಸಿದ್ದಾರೆ. ಈ ವೇಳೆ ಮೂರೂ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ಗುಂಪು ಸೇರುವಿಕೆ, ಪ್ರತಿಭಟನೆ, ಮುಷ್ಕರ ನಡೆಸದಂತೆ ಆದೇಶಿಸಲಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t