ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಸ್ಥಾನದಲ್ಲಿನ ಚಿನ್ನ ಲೇಪಿತ ದ್ವಾರಪಾಲಕ ವಿಗ್ರಹಗಳಿಂದ 4.54 ಕೆಜಿ ಚಿನ್ನ ಕಳುವಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ಮೊದಲು ದೇಗುಲಕ್ಕೆ ಸ್ತ್ರೀಯರ ಪ್ರವೇಶ ವಿಚಾರವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ ಇದೀಗ ಚಿನ್ನದ ಅವ್ಯವಹಾರದಿಂದಾಗಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನದ ಲೇಪನ ಕಾಣೆಯಾಗಿರುವ ಕುರಿತು ಆಕ್ರೋಶ ಭುಗಿಲೆದ್ದಿದೆ. ಇದೇ ಸಮಯದಲ್ಲಿ ಕೇರಳ ಹೈಕೋರ್ಟ್ ಆದೇಶವೊಂದನ್ನು ನೀಡಿದೆ. ಚಿನ್ನದ ಲೇಪನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದೆ.

ಶಬರಿಮಲೆ ಚಿನ್ನ ಲೇಪ ವಿವಾದದ ಪರಿಶೀಲನೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದ್ದು, ತನಿಖಾ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕೆಂದು ಮತ್ತು ಅದನ್ನು ಸಾರ್ವಜನಿಕಗೊಳಿಸಬಾರದು ಎಂದು ಒತ್ತಿ ಹೇಳಿದೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ಪೀಠವು ಈ ನಿರ್ದೇಶನವನ್ನು ನೀಡಿತು. ಶಬರಿಮಲೆಯ ವಿಶೇಷ ಆಯುಕ್ತರಿಗೆ ಮೊದಲು ತಿಳಿಸದೆ ದ್ವಾರಪಾಲಕರ ಮೇಲಿನ ಚಿನ್ನದ ಪಟ್ಟಿಗಳನ್ನು ಏಕೆ ತೆಗೆದುಹಾಕಲಾಯಿತು ಎಂಬುದು ಪ್ರಕರಣದಲ್ಲಿನ ಪ್ರಶ್ನೆಯಾಗಿತ್ತು.

ಶಬರಿಮಲೆ ದೇವಸ್ಥಾನದ ಬೆಲೆಬಾಳುವ ವಸ್ತುಗಳು ಮತ್ತು ಚಿನ್ನಕ್ಕೆ ಸಂಬಂಧಿಸಿದಂತೆ ನಡೆದಿರುವ ಅವ್ಯವಹಾರಗಳ ಬಗ್ಗೆ ವ್ಯಾಪಕ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದ ನಂತರ ಘಟನೆ ಜಗಜ್ಜಾಹೀರಾಗಿದೆ.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









