ಶಿಕಾರಿಪುರ: ಹೊಟ್ಟೆನೋವಿನ ತೀವ್ರ ಬಾಧೆಯಿಂದ ಬಳಲುತ್ತಿದ್ದ ಮಹಿಳೆಯ ಉದರದಿಂದ ಸುದೀರ್ಘ ಶಸ್ತ್ರ ಚಿಕಿತ್ಸೆಯ ಮೂಲಕ 12.5 ಕೆಜಿ ತೂಕದ ದುರ್ಮಾಂಸವನ್ನು ಹೊರತೆಗೆಯುವಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಸೊಪ್ಪಿನಕೇರಿಯ ನಿವಾಸಿ ಗಂಗಮ್ಮ( 55) ಎಂಬ ಮಹಿಳೆ ಕಳೆದ ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ನಿರಂತರವಾಗಿ ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗದ ಹಿನ್ನೆಲೆ ಪರೀಕ್ಷೆ ನಡೆಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸರ್ಜನ್ ಡಾ.ಶ್ರಿನಿವಾಸ್ ನೇತೃತ್ವದ ತಂಡ ಅತ್ಯಂತ ಕ್ಲಿಷ್ಟ ಹಾಗೂ ವಿಶಿಷ್ಟ ಸುದೀರ್ಘ ಶಸ್ತ್ರಚಿಕಿತ್ಸೆ ಮೂಲಕ ಉದರದಲ್ಲಿದ್ದ 12.5 ಕೆಜಿ ತೂಕದ ಬೃಹತ್ ಗಾತ್ರದ ದುರ್ಮಾಂಸವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಗಂಗಮ್ಮ ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿಯೇ ಕೆಲದಿನ ಚಿಕಿತ್ಸೆ ಮುಂದುವರಿಸಲು ಸೂಚಿಸಿದ್ದಾರೆ. ಅರವಳಿಕೆ ತಜ್ಞ ಡಾ.ಕೆ. ಎನ್ ಗುರುದತ್ತ್, ಡಾ.ಪ್ರಕಾಶ್, ಸಿಸ್ಟರ್‌ಭಾರತಿ ಹಾಗೂ ಸಿಬ್ಬಂದಿ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









