ಮನೆ ಶಿವಮೊಗ್ಗ ಶಿವಮೊಗ್ಗದಲ್ಲಿ ರಸ್ತೆ ಅಪಘಾತ: ಬಿಟಿವಿ ವರದಿಗಾರ ಅನಿಲ್ ನಾಯ್ಕ್ ನಿಧನ..!!

ಶಿವಮೊಗ್ಗದಲ್ಲಿ ರಸ್ತೆ ಅಪಘಾತ: ಬಿಟಿವಿ ವರದಿಗಾರ ಅನಿಲ್ ನಾಯ್ಕ್ ನಿಧನ..!!

29
0

ಶಿವಮೊಗ್ಗ (ಮಾ.09): ಬೈಕ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಮೃತರನ್ನು ಬಿಟಿವಿ ಚಾನೆಲ್‌ನ ಶಿವಮೊಗ್ಗ ಜಿಲ್ಲಾ ವರದಿಗಾರ ಅನಿಲ್ ನಾಯ್ಕ್ (45) ಎಂದು ಗುರುತಿಸಲಾಗಿದೆ.


ಭಾನುವಾರ ರಾತ್ರಿ ಶಿವಮೊಗ್ಗದ ಬೆಂಕಿನಗರದಲ್ಲಿ ಅನಿಲ್ ನಾಯ್ಕ್ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಮತ್ತೊಂದು ಸ್ಕೂಟಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಡಿಕ್ಕಿಯ ರಭಸಕ್ಕೆ ನೆಲಕ್ಕೆ ಬಿದ್ದ ಅನಿಲ್ ನಾಯ್ಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರಿಶೀಲಿಸಿದ ವೇಳೆ ಹೊಟ್ಟೆಯ ಒಳಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಲಘು ಹೃದಯಸ್ತಂಭನ ಸಂಭವಿಸಿರುವುದಾಗಿ ತಿಳಿಸಿದ್ದರು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.


ಅನಿಲ್ ನಾಯ್ಕ್ ಈ ಹಿಂದೆ ಟಿವಿ-9ನಲ್ಲಿ ಕ್ಯಾಮರಾಮನ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಟಿವಿ ಚಾನೆಲ್‌ನಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.


ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಪ್ರೆಸ್ ಟ್ರಸ್ಟ್ ಸಂಸ್ಥೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t