ಮನೆ ಶಿವಮೊಗ್ಗ ಶಿವಮೊಗ್ಗ/ರಾತ್ರೋ ರಾತ್ರಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿರತೆಗೆ ಸ್ಕ್ಯಾನಿಂಗ್..!!

ಶಿವಮೊಗ್ಗ/ರಾತ್ರೋ ರಾತ್ರಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿರತೆಗೆ ಸ್ಕ್ಯಾನಿಂಗ್..!!

41
0

ಶಿವಮೊಗ್ಗ: ಅನಾರೋಗ್ಯಕ್ಕೀಡಾದ ಗಂಡು ಚಿರತೆಗೆ ಕಳೆದ ರಾತ್ರಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದೆ. ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ಚಿರತೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ 15 ವರ್ಷದ ಗಂಡು ಚಿರತೆ ‘ಭದ್ರಾ’ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಕಳೆದ ಎರಡು ದಿನಗಳಿಂದ ನಿತ್ರಾಣಗೊಂಡಿತ್ತು. ಚಿಕಿತ್ಸೆ ನೀಡುತ್ತಿದ್ದ ಮೃಗಾಲಯದ ವೈದ್ಯರು ತುರ್ತಾಗಿ ಸ್ಕ್ಯಾನಿಂಗ್ ಅಗತ್ಯವಿದೆ ಎಂದು ಸೂಚಿಸಿದ್ದರು. ಈ ಹಿನ್ನೆಲೆ ಮೃಗಾಲಯದ ಸಿಬ್ಬಂದಿ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆತಂದರು.

ಶಿವಮೊಗ್ಗದ ಮೃಗಾಲಯದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ. ಅಲ್ಲದೆ ಪಶುವೈದ್ಯಕೀಯ ಕಾಲೇಜಿನಲ್ಲೂ ಈ ಸೌಲಭ್ಯ ಲಭ್ಯವಿಲ್ಲ. ಹೀಗಾಗಿ ನಂಜಪ್ಪ ಆಸ್ಪತ್ರೆಯಲ್ಲಿಯೇ ಎಂಆರ್‌ಐ ಸ್ಕ್ಯಾನಿಂಗ್ ಮಾಡಲು ನಿರ್ಧರಿಸಲಾಯಿತು. ಬೆಳಗಿನ ಸಮಯದಲ್ಲಿ ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಚಿರತೆಗೆ ನಡುರಾತ್ರಿ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ನಂಜಪ್ಪ ಆಸ್ಪತ್ರೆ ಎಂಆರ್‌ಐ ಸ್ಕ್ಯಾನಿಂಗ್‌ಗೆ ವಿಶೇಷ ಮಾನ್ಯತೆ ಹೊಂದಿದೆ.
ಚಿರತೆಗೆ ಮಂಪರು ಇಂಜೆಕ್ಷನ್ ನೀಡಿ ಮೃಗಾಲಯದ ವಾಹನದಲ್ಲಿಯೇ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ಕರೆತರಲಾಯಿತು.

ಸ್ಕ್ಯಾನಿಂಗ್ ಪ್ರಕ್ರಿಯೆ ಆರಂಭಿಸುವ ಮೊದಲು ಪುನಃ ಮಂಪರು ಇಂಜೆಕ್ಷನ್ ನೀಡಲಾಯಿತು. ಸುಮಾರು ಅರ್ಧ ಗಂಟೆ ಕಾಲ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯಿತು.


ಈ ಕುರಿತು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಮಾತನಾಡಿ, “ಕಾಡಿನಲ್ಲಿ ಚಿರತೆಗಳು ಸಾಮಾನ್ಯವಾಗಿ 10 ವರ್ಷ ಬದುಕುತ್ತವೆ. ಆದರೆ ಇಲ್ಲಿನ ಮೃಗಾಲಯದಲ್ಲಿ ಈ ಚಿರತೆ 15 ವರ್ಷ ಬದುಕಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಅಗತ್ಯವಿದ್ದು ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿದೆ.

ಮನುಷ್ಯರು ಮತ್ತು ಪ್ರಾಣಿಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಒಂದೇ ರೀತಿಯದ್ದಾಗಿರುವುದರಿಂದ ಇಲ್ಲಿಯೇ ಸ್ಕ್ಯಾನಿಂಗ್ ಮಾಡಲಾಗಿದೆ. ಮುಂದಿನ ಚಿಕಿತ್ಸೆಯನ್ನು ಮೃಗಾಲಯದಲ್ಲಿಯೇ ಮುಂದುವರಿಸಲಾಗುತ್ತದೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ