ಆನಂದಪುರ:
ಉತ್ತಮವಾಗಿ ಸ್ವಾವಲಂಬಿ ಜೀವನವನ್ನು ನಡೆಸುವ ನಿಟ್ಟಿನಲ್ಲಿ ರೈತರು ಆಸೆಯಿಂದ ಶುಂಠಿಯನ್ನು ಬೆಳೆಯಲು ಮುಂದಾದ ರೈತರಿಗೆ ಈ ಬಾರಿ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಬೆಳೆಗೆ ಬೆಂಕಿ ರೋಗ, ಕೊಳೆ ರೋಗ ಇದರ ಜೊತೆಗೆ ಈ ಬಾರಿ ಹೊಸದೊಂದು ರೋಗವಾದ ಎಲೆ ಚುಕ್ಕಿ ರೋಗವು ಬಾಧಿಸುತ್ತಿದೆ.
ಮಲೆನಾಡಿನ ತೊಟ್ಟಿಲು ಸಾಗರ ತಾಲೂಕಿನಲ್ಲಿ ಈ ಬಾರಿ ಶುಂಠಿ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ.ಇದರ ಜೊತೆಗೆ ಹಳದಿ ಗಿಡದಲ್ಲಿ ಬಿಳಿ ಸುಳಿ ಕಾಣಿಸಿಕೊಂಡು ಸೊರಗುತ್ತಿವೆ. ಗಿಡಗಳು ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಳೆಯು ಬೆಂಕಿ ರೋಗದಿಂದಲೂ ಬಳಲಿ ಬೆಂಡಾಗುತ್ತಿದೆ’ ಎಂದು ರೈತ ನವೀನ್ ತನ್ನ ಅಳಲನ್ನು ತೋಡಿಕೊಂಡರು.

ಎಲೆ ಚುಕ್ಕಿ ರೋಗ ಈ ಬಾರಿ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಎಡೆ ಬಿಡದೆ ಸುರಿದ ಮಳೆಯಿಂದ ವಿಪರೀತ ತೇವಾಂಶ ಉಂಟಾಗಿ ರೋಗಗಳು ಉಲ್ಬಣವಾಗುತ್ತಿದೆ ಎಂದು ಆನಂದಪುರ ಹೋಬಳಿ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ರಭಸದ ಮಳೆಯಾಗಿ ಬಿಸಿಲಿನ ವಾತಾವರಣವಿದ್ದಿದ್ದರೆ, ಎಂತಹ ರೋಗವಿದ್ದರೂ ನಾಶವಾಗುತ್ತಿತ್ತು. ಮಳೆ ಜೋರಾಗಿ ಸುರಿದಾಗ ಮಾತ್ರ ಗಿಡಗಳಲ್ಲಿರುವ ಕೀಟಗಳು ನಾಶವಾಗುತ್ತವೆ. ತೇವಾಂಶವಿದ್ದರೆ ಕೀಟಗಳ ಸಂತಾನ ವೃದ್ಧಿಯಾಗಿ ಬೆಳೆ ನಾಶವಾಗುತ್ತದೆ. ಮಳೆ ಮತ್ತು ತೇವಾಂಶ ಇರುವುದರಿಂದ ಯಾವುದೇ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.
ರೋಗ ಲಕ್ಷಣ:
ಶುಂಠಿ ಎಲೆಗಳ ಮೇಲೆ ಕಾಣಿಸಿಕೊಳ್ಳುವ ಕಂದು ಮಿಶ್ರಿತ ಬಿಳಿ ಚುಕ್ಕಿಗಳು ಕ್ರಮೇಣ ಎಲ್ಲಾ ಎಲೆಗಳಿಗೂ ಹಬ್ಬುತ್ತವೆ. ರೋಗಬಾಧಿತ ಶುಂಠಿಯ ದಂಟುಗಳಲ್ಲಿ ಚಿಕ್ಕ ಚಿಕ್ಕ ಕಪ್ಪು ಕಲೆಗಳು ನಿರ್ಮಾಣಗೊಂಡು ಬೆಳವಣಿಗೆ ನಿಯಂತ್ರಿಸುವ ಜೊತೆಗೆ ಬೆಳೆಯನ್ನು ಕೃಶಗೊಳಿಸುತ್ತವೆ. ಮೊದಲು ಕೆಲವು ಗಿಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ರೋಗ, ಕೆಲವೇ ದಿನಗಳಲ್ಲಿ ಇಡೀ ಪ್ರದೇಶಕ್ಕೆ ವೇಗವಾಗಿ ಆವರಿಸಿಕೊಂಡು ಬಾಧಿಸುತ್ತದೆ.

ಎಲೆಚುಕ್ಕಿ ರೋಗದಿಂದ ಶುಂಠಿ ಗಿಡ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತವೆ. ಎಲೆಗಳು ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಬೆಳೆ ಕ್ರಮೇಣ ಒಣಗುತ್ತದೆ. ಬೆಂಕಿ ರೋಗವಿದ್ದರೆ ಗಿಡದ ಎಲೆ ಮತ್ತು ಕಾಂಡಗಳ ಮೇಲೆ ವಜ್ರಾಕಾರ ಅಥವಾ ಕಣ್ಣಿನ ಆಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ಎಲೆಚುಕ್ಕಿ ರೋಗವು ಶಿಲಿಂಧ್ರದಿಂದ ಬರುತ್ತಿದ್ದು, ಸೂಕ್ಷ್ಮಾಣುಗಳು ಎಲೆಯ ಹರಿತ್ತನ್ನು ಸಂಪೂರ್ಣವಾಗಿ ಭಕ್ಷಿಸಿ, ರಸವನ್ನು ಹೀರುತ್ತವೆ. ಇದರಿಂದ ಬಿಳಿಚಿಕೊಂಡ ಬೆಳೆ, ತನ್ನ ಆಹಾರ ತಯಾರಿಸಲಾಗದೆ ನಿತ್ರಾಣಗೊಂಡು ಒಣಗಲು ಆರಂಭಿಸುತ್ತದೆ. ನಂತರ ಕೊಳೆರೋಗಕ್ಕೆ ತುತ್ತಾಗುತ್ತದೆ. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡದಿದ್ದರೆ ರೈತರು ನಷ್ಟ ಅನುಭವಿಸುವ ಅಪಾಯವಿದೆ.

ತೋಟಗಾರಿಕೆ ಅಧಿಕಾರಿಗಳ ಸಲಹೆ:
ರೈತರು ಎಲೆ ಚುಕ್ಕಿ ರೋಗ ಕಂಡುಬಂದಲ್ಲಿ ಮುಂಜಾಗ್ರತೆ ಕ್ರಮವಾಗಿ ಡಿಪುಕಾಲೋಜಲ್, ಪ್ರಪುಕಾಲೋಜಲ್ ಎಂಬ ಔಷಧಿ ಬರುತ್ತದೆ ಇದನ್ನು ಶುಂಠಿಗೆ ಸಿಂಪಡಿಸಿ, ಪೊಟ್ಯಾಷ್ ಗೊಬ್ಬರ ಹಾಕಬೇಕು ಎಂದು ಸಾಗರ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವರಾಜ ಬಾಸುರ ತಿಳಿಸಿದ್ದಾರೆ.ಈ ಬಾರಿ ಮಲೆನಾಡಿನಲ್ಲಿ ಸುರಿದ ಅಧಿಕ ಮಳೆಯಿಂದ ಎಲೆ ಚುಕ್ಕಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಉಲ್ಬನವಾಗಿದೆ ಇದರ ಕುರಿತು ನಾವು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಇರುವಕ್ಕಿಯಲ್ಲಿ ಒಂದು ದಿನದ ತರಬೇತಿಯನ್ನು ಸಹ ರೈತರಿಗೆ ನೀಡಿದ್ದೇವೆ ಮುಂದಿನ ದಿನದಲ್ಲಿ ಕೂಡ ನೀಡುತ್ತೇವೆ ಎಂದು ಶಿವರಾಜ ಬಾಸುರ ಸಾಗರ ಸಹಾಯಕ ತೋಟಗಾರಿಕೆ ಅಧಿಕಾರಿ ತಿಳಿಸಿದರು.
ನಷ್ಟದ ಭೀತಿ; ಪರಿಹಾರಕ್ಕೆ ಮನವಿ
ಉತ್ತಮ ಬೆಳೆ ಬರುವ ನಿರೀಕ್ಷೆಯಿಂದ ಶುಂಠಿ ನಾಟಿ ಮಾಡಿದ್ದೆವು. ಆದರೆ ಎಲೆಚುಕ್ಕಿ ರೋಗ ನನ್ನ ಜಮೀನಿಗೂ ವ್ಯಾಪಿಸಿದೆ. ಅಂಗಡಿಯವರು ಹೇಳಿದ್ದ ಔಷಧ ತಂದು ಸಿಂಪಡಿಸಿದ್ದು ಇನ್ನೂ ಹತೋಟಿಗೆ ಬಂದಿಲ್ಲ. ನಷ್ಟದ ಭಯ ಶುರುವಾಗಿದೆ. ಬೆಳೆ ಸಂಪೂರ್ಣ ನೆಲಕಚ್ಚಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಅಕ್ಷಯ್ ಮನವಿ ಮಾಡಿದ್ದಾರೆ.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









