ಸಾಗರ:
ಸಮಾಜದಲ್ಲಿ ಶಾಂತಿ ಹಾಗೂ ಸಮಾಧಾನವನ್ನು ಕಂಡುಕೊಳ್ಳಲು ಮನುಷ್ಯನಿಗೆ ತೃಪ್ತಿ ಮತ್ತು ಮಾನವೀಯತೆ ಮುಖ್ಯವಾಗಿ ಇರಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಿಸಿದರು.
ತಾಲ್ಲೂಕಿನ ಎಂ.ಎಲ್.ಹಳ್ಳಿಯಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ರಾಮಕೃಷ್ಣ ಸಮೂಹ ಸಂಸ್ಥೆ ಹಾಗೂ ಯುವ ಸ್ಪೂರ್ತಿ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದು ತಮ್ಮ ೧೮೫೭ನೇ ವಿದ್ಯಾ ಸಂಸ್ಥೆಗೆ ಭೇಟಿಕೊಟ್ಟು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವ ಕಾರ್ಯಕ್ರಮವಾಗಿದೆ ಎಂದ ಅವರು ಯಾವಾ ಮನುಷ್ಯನಲ್ಲಿ ಹಣ, ಅಧಿಕಾರ, ಸಂಪತ್ತು ಗಳಿಸುವ ಹಪಹಪಿ ಇರುತ್ತದೆಯೋ ಅಂತಹವರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ ಎಂದರು.
ಅಡ್ಡದಾರಿಯಿಂದ ಹಣ ಮಾಡುವುದು ದೊಡ್ಡ ಅಪಾಯ. ಇದ್ದದ್ದರಲ್ಲಿಯೆ ಸಂತೋಷಪಡುವ, ಅಲ್ಪಸ್ವಲ್ಪ ದಾನ ಮಾಡಿ ತೃಪ್ತಿಪಡುವ, ಮಾನವೀಯ ಮೌಲ್ಯವನ್ನು ಬಿತ್ತುವ ಕೆಲಸವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಹಳ ಹಿಂದೆಕಾಲದಲ್ಲಿ ಅಧಿಕಾರಿಗಳಾಗಲಿ ರಾಜಕಾರಣಿಗಳೇ ಆಗಲಿ ಇಷ್ಟೊಂದು ಭ್ರಷ್ಟ ವ್ಯವಸ್ಥೆಗಳು ಇರಲಿಲ್ಲ ಬಹಿಷ್ಕಾರಕ್ಕೆ ಅಥವಾ ಮಾನವೀಯತೆಗೆ ಅಂಜುತ್ತಿದ್ದರು. ಜೈಲಿಗೆ ಹೋಗಿರುವವರ ಮನೆ ಹತ್ತಿರ ಹೋಗಬೇಡಿ ಮಕ್ಕಳೆ ಎಂದು ಎಚ್ಚರಿಸುವ ಕಾಲವಿತ್ತು. ಆದರೆ ಈಗ ಹಾಗಲ್ಲ ಎಲ್ಲಿ ನೋಡಿದರೂ ಸಹ ಲಂಚ,ಮೋಸ,ವಂಚನೆಗಳೆ ನಡೆಯುತ್ತಿದೆ ಎಂದು ವಿಷಾದಿಸಿದರು.

ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಎಲ್ಲವೂ, ಎಲ್ಲರೂ ಒಳ್ಳೆಯವರು ಎಂದು ಕೊಂಡಿದ್ದೆ. ಆದರೆ ಲೋಕಾಯುಕ್ತಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಅನಾವರಣವಾಗುತ್ತಾ ಹೋಯಿತು. ಹಿಂದೆ ನಾವು ಓದುವ ಪಾಠಗಳಲ್ಲಿ ನೀತಿ ಶಿಕ್ಷಣ ಇತ್ತು. ಆದರೆ ಈಗ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುತ್ತಿಲ್ಲ ಎಂದು ಶೈಕ್ಷಣಿಕ ಲೋಪಗಳ ಕುರಿತು ಬೆಳಕುಚೆಲ್ಲಿದರು.ಈ ಹಿಂದೆಲ್ಲ ಒಳ್ಳೆಯ ಕೆಲಸ ಮಾಡಿದಾಗ ಸನ್ಮಾನ, ಕೆಟ್ಟ ಕೆಲಸ ಮಾಡಿದಾಗ ಶಿಕ್ಷೆ ಇತ್ತು.
ಈಗ ಶ್ರೀಮಂತಿಕೆ, ಅಧಿಕಾರ ಬೇಕು ಎನ್ನುವ ಹಂಬಲ ವಿಜೃಂಭಿಸಿ ಒಳ್ಳೆಯತನ ದೂರವಾಗುತ್ತಿದೆ.ಹಣವಂತರು,ಅಧಿಕಾರಯುತರಿಗೆ ನಿರಂತರ ಸನ್ಮಾನಗಳು ಲಭಿಸುವಂತಹ ಪರಿಸ್ಥಿತಿಗೆ ಬದಲಾಗಿದೆ ಎಂದರು. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕೆ ಈಗಿನಿಂದಲೇ ಸಂಕಲ್ಪ ಕೈಗೊಳ್ಳಬೇಕು,ಭವಿಷ್ಯದ ನೀತಿವಂತ ಪ್ರಜೆಗಳಾಗಬೇಕೇ ಹೊರತು ಹಣ ಮಾಡುವ ಹಪಹಪಿಗೆ ಒಳಗಾಗಬಾರದು ಎಂದು ತಿಳಿಸಿದರು.

ರಾಷ್ಟ್ರಸೇವಾ ಯೋಧರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಭ್ರಷ್ಟಾಚಾರ ಸಮಾಜಕ್ಕೆ ಶಾಪವಾಗಿದೆ. ಲೋಕಾಯುಕ್ತ ಸಂತೋಷ್ ಹೆಗಡೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟರ ಹೆಡೆಮುರಿ ಕಟ್ಟುವ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು.
ಎಲ್ಲಿಯವರೆಗೆ ನಗದು ವ್ಯವಹಾರ ಇರುತ್ತದೆಯೋ ಅಲ್ಲಿಯವರೆಗೆ ಭ್ರಷ್ಟಾಚಾರ ನಿಯಂತ್ರಣ ಕಷ್ಟಸಾಧ್ಯ, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಆನ್‌ಲೈನ್ ಮೂಲಕ ಹಣಕಾಸು ವಹಿವಾಟಿನ ಕಡೆ ಗಮನ ಹರಿಸಬೇಕು ಎಂದರು.ಈ ಶಾಲೆಯಲ್ಲಿ ಇಂತಹ ಸಂವಾದ ಕಾರ್ಯಕ್ರಮ ಹಾಕಿಕೊಂಡು ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಮಾರ್ಗದರ್ಶನ ಹಾಗೂ ಸ್ಪೂರ್ತಿದಾಯಕವಾಗಿದೆ ಎಂದರು.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರನ್ನು ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆವತಿಯಿಂದ ಸನ್ಮಾನಿಸಿದರು.ರಾಮಕೃಷ್ಣ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಸ್ಪೂರ್ತಿ ಅಕಾಡೆಮಿ ಅಧ್ಯಕ್ಷ ಸುಂದರೇಶ್, ಸಾಗರ ಗ್ರಾಮಾಂತರ ಪೋಲೀಸ್ ನೀರೀಕ್ಷಕ ಮಹಾಬಲೇಶ್ವರ, ವಕೀಲರಾದ ರಂಗನಾಥ ಹಾಗೂ ಷಣ್ಮುಖಪ್ಪ,ವೀರೇಶ್ ನಾಯಕ,ಚಂದ್ರಶೇಖರ ಮುಂತಾದವರು ಇದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗುಂಪನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









