Home Blog ಸಹ್ಯಾದ್ರಿ ಕೃಷಿ ಓನ್ ಯೋಜನೆಗೆ ಆದ್ಯತೆ; ರೈತರಿಗೆ ತಂತ್ರಜ್ಞಾನ ಮನೆಬಾಗಿಲಿಗೆ: ನೂತನ ಕುಲಪತಿ ಡಾ....

ಸಹ್ಯಾದ್ರಿ ಕೃಷಿ ಓನ್ ಯೋಜನೆಗೆ ಆದ್ಯತೆ; ರೈತರಿಗೆ ತಂತ್ರಜ್ಞಾನ ಮನೆಬಾಗಿಲಿಗೆ: ನೂತನ ಕುಲಪತಿ ಡಾ. ಎಂ.ವಿ. ಧನಂಜಯ್..!!

40
0

ಶಿವಮೊಗ್ಗ(ಆನಂದಪುರ): ಮುಂದಿನ ಆರು ತಿಂಗಳೊಳಗೆ “ಸಹ್ಯಾದ್ರಿ ಕೃಷಿ ಓನ್” ಯೋಜನೆಯನ್ನು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಆರಂಭಿಸಿ, ರೈತರಿಗೆ ತಂತ್ರಜ್ಞಾನ ಆಧಾರಿತ ಕೃಷಿ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಇರುವಕ್ಕಿಯ ನೂತನ ಕುಲಪತಿ ಡಾ. ಎಂ.ವಿ. ಧನಂಜಯ್ ಹೇಳಿದರು.

ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಸಹ್ಯಾದ್ರಿ ಕೃಷಿ ಓನ್ ಯೋಜನೆಗೆ ₹20 ರಿಂದ ₹50 ಕೋಟಿ ಅನುದಾನ ಪಡೆಯುವ ಉದ್ದೇಶ ಹೊಂದಿದ್ದು, ಸಮರ್ಪಕ ಅನುಷ್ಠಾನಕ್ಕಾಗಿ ಹೊಸ ಚಿಂತನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಕಳೆದ 30 ವರ್ಷಗಳಿಂದ ಭಾರತೀಯ ತೋಟಗಾರಿಕಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ದೇಶಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರ ಅಭಿವೃದ್ಧಿಗೆ ಕೈಜೋಡಿಸಿ ಉತ್ತಮ ಕೆಲಸ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.

ಪ್ರಸ್ತುತ ಕೃಷಿ ಕ್ಷೇತ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ, ಅವು ಪರಿಣಾಮಕಾರಿಯಾಗಿ ರೈತರನ್ನು ತಲುಪುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ರೈತರೊಂದಿಗೆ ನೇರ ಸಂಪರ್ಕ ಸಾಧಿಸಿ ಕಾರ್ಯನಿರ್ವಹಿಸಲಿದೆ.

ಸಾಂಪ್ರದಾಯಿಕ ಬೆಳೆಗಳಿಂದ ಮಾತ್ರ ರೈತರಿಗೆ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಆದ್ದರಿಂದ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಲಾಭದಾಯಕ ತೋಟಗಾರಿಕಾ ಬೆಳೆಗಳನ್ನು ಬೆಳೆಸುವಂತೆ ರೈತರಿಗೆ ಸಲಹೆ ಹಾಗೂ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡಲಾಗುವುದು ಎಂದರು.

ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದ ತಕ್ಷಣ ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲೇ ಸೀಮಿತವಾಗದೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಉದ್ಯಮಿಗಳಾಗಿ ಬೆಳೆಯಲು ಇರುವ ಅಪಾರ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಾಹೀರಾತು