✒️..ಅಮಿತ್, ಆರ್. ಆನಂದಪುರ
ಸಾಗರ: ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಐಪಿಎಸ್ ತಿಳಿಸಿದರು.
ಅವರು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ದಿನದ ಅಂಗವಾಗಿ ಗುರುವಾರ ಸಾಗರದ ನೆಹರು ಮೈದಾನದಲ್ಲಿ ಸಾಗರ ಉಪವಿಭಾಗದ ವತಿಯಿಂದ ಆಯೋಜಿಸಿದ್ದ 5 ಕಿ.ಮೀ. ಮ್ಯಾರಥನ್‌ಗೆ ಚಾಲನೆ ನೀಡಿ ಮಾತನಾಡಿದರು.
“ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಮಾಜದ ಸಹಭಾಗಿತ್ವದಿಂದಲೇ ಈ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ” ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಟ ಚಟಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈ ಪಿಡುಗನ್ನು ತಡೆಗಟ್ಟಲು ಪೋಷಕರು, ಶಿಕ್ಷಕರು, ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಮಾಜವನ್ನು ಮಾದಕ ವಸ್ತು ಮುಕ್ತಗೊಳಿಸುವ ಕಾರ್ಯದಲ್ಲಿ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಮಾದಕ ವ್ಯಸನವು ವ್ಯಕ್ತಿಯ ಭವಿಷ್ಯವನ್ನು ಹಾಳು ಮಾಡುವುದರ ಜೊತೆಗೆ ಕುಟುಂಬದ ನೆಮ್ಮದಿಯನ್ನೂ ಕಸಿದುಕೊಳ್ಳುತ್ತದೆ. ಕ್ರೀಡೆ, ಯೋಗ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯುವಕರು ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಮ್ಯಾರಥನ್‌ನಲ್ಲಿ ಸಾಗರ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಪುಲ್ಲಯ್ಯ ರಾಥೋಡ್, ಆನಂದಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್, ಕಾರ್ಗಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜ್, ಸಾಗರ ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಾಂತರಾಜ್, ದೇವರಾಜ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಅಲ್ಲದೆ ಯೋಗ ತಂಡದ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮ್ಯಾರಥನ್‌ನಲ್ಲಿ ಪಾಲ್ಗೊಂಡು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸಂದೇಶ ಸಾರಿದರು.
ನೆಹರು ಮೈದಾನದಿಂದ ಆರಂಭವಾದ ಮ್ಯಾರಥನ್ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತ್ತೆ ನೆಹರು ಮೈದಾನದಲ್ಲೇ ಸಮಾಪ್ತಿಗೊಂಡಿತು.
ಜಾಹೀರಾತು:













