ಮನೆ Blog ಸಾಗರ ಮಾರಿಕಾಂಬ ಜಾತ್ರೆ ಹಿನ್ನಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಗೋಪಾಲಕೃಷ್ಣ ಬೇಳೂರು..!!

ಸಾಗರ ಮಾರಿಕಾಂಬ ಜಾತ್ರೆ ಹಿನ್ನಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಗೋಪಾಲಕೃಷ್ಣ ಬೇಳೂರು..!!

28
0

ಸಾಗರ:ಮಾರಿಜಾತ್ರೆಯ ಯಶಸ್ಸಿಗಾಗಿ ಒಂದೊಂದು ಸಮಿತಿಗೆ ತಾಲೂಕು ಮಟ್ಟದ ಒಬ್ಬೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಅಧಿಕಾರಿಗಳು ಜಾತ್ರೆ ಯಶಸ್ಸಿಗಾಗಿ ತಮಗೆ ವಹಿಸಿರುವ ಸಮಿತಿ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದರು.

ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 20 ಉಪ ಸಮಿತಿಗಳನ್ನು ರಚಿಸ ಲಾಗಿದೆ. ಅಧಿಕಾರಿಗಳ ಜೊತೆ ಸಮಿತಿ ಸಂಚಾಲಕರು, 20 ಸದಸ್ಯರು ಇರುತ್ತಾರೆ ಎಂದು ತಿಳಿಸಿದರು.

ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆಗೆ ಕನಿಷ್ಠ 8 ರಿಂದ 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮೂರು ದಿನಗಳ ಕಾಲ ಅಮ್ಮನವರ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸಲಿದ್ದು, ಬಿಸಿಲಿನಲ್ಲಿಸರತಿಸಾಲಿನಲ್ಲಿನಿಲ್ಲುವವರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಹಿಂದಿನ ಜಾತ್ರೆಯಂತೆ ವಿಐಪಿ ಪಾಸ್‌ ಸಂಸ್ಕೃತಿಯನ್ನು ಬಿಟ್ಟು ಪ್ರಮುಖ ಕೆಲವರಿಗೆ ವಿಶೇಷ ಪಾಸ್ ನೀಡಿ ಎಂದು ಹೇಳಿದರು.

ಮಾರಿಕಾಂಬಾ ಸಮಿತಿ ವತಿಯಿಂದ ನಗರದ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯಿಂದ ಹೆಚ್ಚಿನ ಜನರನ್ನು ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸೂಚಿಸಿದ ಶಾಸಕರು, ಜಾತ್ರೆಗೆಬರುವವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನಮ್ಮ ಕ್ಲಿನಿಕನ್ನು ತಾತ್ಕಾಲಿಕವಾಗಿ ಜಾತ್ರೆ ನಡೆಯುವ ಕಡೆ ಸ್ಥಳಾಂತರಿಸುವ ಜೊತೆಗೆ ಒಂದು ಹೆಚ್ಚುವರಿ ಆಂಬ್ಯುಲೆನ್ಸ್ ಸೇವೆಗೆ ಇರಿಸಲಾಗುತ್ತದೆ ಎಂದು ಹೇಳಿದರು.

ಜಾತ್ರೆಯಲ್ಲಿ ಸರಗಳ್ಳತನ ಇನ್ನಿತರ ಅಪರಾಧ ಕೃತ್ಯವನ್ನು ತಡೆಗಟ್ಟಲು ಹೆಚ್ಚುವರಿ ಕ್ರೈಂ ಬ್ರಾಂಚ್ ಸಿಬ್ಬಂದಿ ನೇಮಕದ ಜೊತೆಗೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲು ಜಿಲ್ಲಾ ರಕ್ಷಣಾಧಿ ಕಾರಿಗಳಿಗೆ ಮನವಿ ಮಾಡಲಾಗುತ್ತದೆ. ಅಮ್ಯೂಸ್ ಮೆಂಟ್ ಪಾರ್ಕ್ ಹೆಚ್ಚಿನದರಕ್ಕೆ ಖರೀದಿಮಾಡಿದ್ದೇವೆಂದು ಆಟಿಕೆಗಳ ದರ ಜಾಸ್ತಿ ಮಾಡುವಂತಿಲ್ಲ. ಜಾತ್ರೆಗೆ ಬರುವ ಬಡ ಮತ್ತು ಮಧ್ಯಮ ಕುಟುಂಬದವರ ಕೈಗೆಟಕುವಂತೆ ಎಲ್ಲ ಆಟಿಕೆಗಳ ದರವನ್ನು ನಿಗದಿ ಮಾಡುವಂತೆ ಸೂಚಿಸಿದರು.

ಉಪವಿಭಾಗಾಧಿಕಾರಿ ಕುಮಾ‌ರ್, ತಹಸೀಲ್ದಾರ್‌ಚಂದ್ರಶೇಖರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಹಾಜರಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ