ಮನೆ Blog ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು-ಕೋಡಿಹಳ್ಳಿ ಚಂದ್ರಶೇಖರ್...

ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು-ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ…!!

116
0

ಸಾಗರ:

ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಮೈಕ್ರೋಫೈನಾನ್ಸ್‌ನವರಿಂದ ರೈತರ ಮನೆಗೆ ಹೋಗಿ ಬಲವಂತದ ವಸೂಲಿಗೆ ಕಾಯ್ದೆ ತಂದಿರುವುದು ನೇರವಾದ ದೌರ್ಜನ್ಯ ತಡೆಯುವಲ್ಲಿ ಸಹಕಾರಿಯಾಗಿದೆ.ಆದರೇ ನ್ಯಾಯಾಲಯದ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳು, ಮೈಕ್ರೋಫೈನಾನ್ಸ್ ಗಳು ರೈತರ ಸಾಲ ವಸೂಲಾತಿಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿವೆ ಎಂದು ದೂರಿದರು.

ರಾಜ್ಯಾದ್ಯಂತ ರೈತರಿಂದ ಸಾಲ ವಸೂಲಾತಿ ಹೆಸರಿನಲ್ಲಿ ರೈತರ ಆಸ್ತಿ ಮನೆ ಮೇಲೆ ದಾವೆ ಹೂಡಿ ಡಿಕ್ರಿ ಮಾಡಿಸಿ ರೈತರ ಭೂಮಿ ಮತ್ತು ಮನೆಗಳ ಹರಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ತಕ್ಷಣ ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ರೈತರ ಆಸ್ತಿಗಳನ್ನು ಹರಾಜು ಹಾಕದಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಉತ್ತಮ ಮಳೆಯಾಗಿ ಬೆಳೆ ಉತ್ತಮವಾಗಿ ಬಂದರೆ ರೈತ ಸಾಲ ತೀರಿಸಲು ಹೆದರುವುದಿಲ್ಲ. ಆದರೆ ಮಳೆ ಕಣ್ಣುಮುಚ್ಚಾಲೆಯಿಂದ ರೈತ ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾನೆ. ರೈತನೇ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ರೈತ ಸಾಲ ಹೇಗೆ ತೀರಿಸಲು ಸಾಧ್ಯ ಎನ್ನುವ ಕನಿಷ್ಟ ಪರಿಜ್ಞಾನ ಸರ್ಕಾರಕ್ಕೆ ಇರಬೇಕು ಎಂದು ಒತ್ತಿ ಹೇಳಿದರು.

೧೯೯೫ರಲ್ಲಿ ರೈತ ಆತ್ಮಹತ್ಯೆ ಜಾಸ್ತಿಯಾದಾಗ ಅಂದಿನ ಸರ್ಕಾರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಡಾ. ಎಂ.ಎಸ್.ಸ್ವಾಮಿನಾಥನ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗದಿಂದ ಸರ್ಕಾರಕ್ಕೆ ವರದಿ ನೀಡಿ ೨೬ ವರ್ಷ ಕಳೆದಿದ್ದರೂ ಈತನಕ ಅದು ಅನುಷ್ಟಾನಕ್ಕೆ ಬಂದಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೂರನೇ ಅವಧಿ ಇದಾಗಿದೆ. ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಪ್ರಧಾನಿಯವರು ೩೦೦ ಕ್ಕೂ ಹೆಚ್ಚು ಚುನಾವಣಾ ಭಾಷಣಗಳಲ್ಲಿ ಉಲ್ಲೇಖಿಸಿದ್ದರು.ಆದರೇ ಚುನಾವಣೆಯಲ್ಲಿ ಜಯಗಳಿಸಿ ಪ್ರಧಾನಿಯಾದ ನಂತರ ಈತನಕ ಅವರಿಗೆ ರೈತರು ನೆನಪಾಗದೆ ಇರುವುದು ದುರದೃಷ್ಟಕರ ಸಂಗತಿ ಎಂದು ಟೀಕಿಸಿದರು.

ರೈತರ ಆರ್ಥಿಕ ದಿವಾಳಿತನವೇ ಆತ್ಮಹತ್ಯೆಗೆ ಕಾರಣ, ರೈತರ ಆರ್ಥಿಕ ಸಂಕಷ್ಟ ನಿವಾರಿಸಲು ರೈತರ ಉತ್ಪನ್ನಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಸ್ವಾಮಿನಾಥನ್ ವರದಿಯಲ್ಲಿ ಸಲಹೆಗಳ ನೀಡಿದ್ದರೂ ಅದರ ಪಾಲನೆಯಾಗಿಲ್ಲ. ಆದ್ದರಿಂದಲೇ ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಅಮೇರಿಕಾದ ಒತ್ತಡಕ್ಕೆ ಮಣಿಯದ ಪ್ರಧಾನಿ ಮೋದಿ ನಿಲುವಿಗೆ ಸ್ವಾಗತಅಮೇರಿಕಾ ನಮ್ಮ ಭಾರತವನ್ನು ಬೆದರಿಕೆಯ ಮೂಲಕ ಬ್ಲಾಕ್‌ಮೇಲ್ ತಂತ್ರದಿಂದ ತನ್ನ ಉತ್ತಪನ್ನಗಳ ಮಾರಾಟದ ದೊಡ್ಡ ಮಾರುಕಟ್ಟೆಯನ್ನಾಗಿಸಿಕೊಳ್ಳುವ ಹುನ್ನಾರಕ್ಕೆ ಭಾರತದ ಪ್ರಧಾನಿ ಮಣಿಯದಿರುವುದು ಅತ್ಯಂತ ಸ್ವಾಗತದ ಸಂಗತಿಯಾಗಿದೆ ಎಂದರು.ಅಮೇರಿಕಾದಲ್ಲಿ ಮುಂದಿನ ೧೧ ವರ್ಷಗಳವರೆಗೂ ಭಾರತಕ್ಕೆ ಸರಬರಾಜು ಮಾಡುವಷ್ಟು ಹೈನುಗಾರಿಕಾ ಉತ್ಪನ್ನಗಳು ಹಾಲಿನಪುಡಿಯಾದಿಯಾಗಿ ಸಂಗ್ರಹವಿದೆ.ಹೈನುಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತದಂತಹ ಬಡ-ಮಧ್ಯಮವರ್ಗಗಳ ಜನರಿರುವ ರಾಷ್ಟ್ರಗಳೇ ಮುಂದುವರಿದ ರಾಷ್ಟ್ರಗಳ ವಾಣಿಜ್ಯೋದ್ಯಮದ ವಿಕಾಸದ ಕೇಂದ್ರಗಳಾಗಿವೆ.

ಭಾರತ ಇಂತಹ ತೆರಿಗೆ ಏರಿಕೆ ಬ್ಲಾಕ್‌ಮೇಲ್ ತಂತ್ರಕ್ಕೆ ಸೆಡ್ಡು ಹೊಡೆದಿರುವುದು ಭಾರತದ ಭವಿಷ್ಯಕ್ಕೆ ಪೂರಕವಾಗಿದೆ ಎಂದರು.ಶರಾವತಿ ಪಂಪ್ಡ್ ಸ್ಟೋರೇಜ್ ಅವೈಜ್ಞಾನಿಕ ಯೋಜನೆಯಾಗಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯನಾಶವಾಗುತ್ತದೆ. ಬದಲಾಗಿ ಸೋಲಾರ್ ಯೋಜನೆಗಳ ಮೂಲಕ ಅಗತ್ಯ ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಅರಣ್ಯನಾಶದಂತಹ ಶರಾವತಿ ಪಂಪ್ಡ್ ಸ್ಟೋರೇಜ್ ಮಾದರಿಯ ಯೋಜನೆ ಈ ಹಿಂದೆ ಹಾಸನದಲ್ಲಿ ಜಿಲ್ಲೆಯಲ್ಲಿ ಸರ್ಕಾರ ಅನುಷ್ಠಾನಕ್ಕೆ ಮುಂದಾದಾಗ ರಾಜ್ಯ ರೈತ ಸಂಘ ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿತ್ತು. ಸದರಿ ಪ್ರಕರಣದಲ್ಲಿ ರೈತ ಸಂಘ ಯಶಸ್ಸು ಕಂಡಿದ್ದು, ಅಗತ್ಯ ಬಿದ್ದರೆ ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ಆಗುವ ಅನಾಹುತ ಕುರಿತು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ಪ್ರಮುಖರಾದ ರಾಮಚಂದ್ರ, ಈರಣ್ಣ, ನಾಗರಾಜ್,ಮೇಘರಾಜ್, ವೀರಭದ್ರ, ವೆಂಕಟೇಶ್, ಹಾಜರಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗುಂಪನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t