ಬೆಂಗಳೂರು.ಸೆ.24:
ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್‌ಎಲ್ ಭೈರಪ್ಪ(94) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ತನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎಸ್. ಎಲ್ .ಭೈರಪ್ಪ ಅವರು ತಮ್ಮ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅವರ ಪ್ರಮುಖ ಕಾದಂಬರಿಗಳಾದ ವಂಶವೃಕ್ಷ, ದಾಟು, ತಂತು ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ.

ಭೈರಪ್ಪನವರು ಕಾದಂಬರಿಗಳ ಜೊತೆಗೆ ಸೌಂದರ್ಯ ಮೀಮಾಂಸೆಯ ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದು, 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಭೈರಪ್ಪ ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ದರು. ಎಸ್.ಎಲ್. ಭೈರಪ್ಪನವರು ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಪುತ್ರ. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನ ಸುತ್ತಮುತ್ತಲಿನ ಶಾಲೆಗಳಲ್ಲಿ ಮುಗಿಸಿದರು. ನಂತರ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಸಹ ಪಡೆದರು.









