ಮನೆ Blog ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಕಿಗಾಹುತಿ : 20ಕ್ಕಿಂತ ಹೆಚ್ಚು ಜನರು ಸಜೀವ ದಹನ..!!

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಕಿಗಾಹುತಿ : 20ಕ್ಕಿಂತ ಹೆಚ್ಚು ಜನರು ಸಜೀವ ದಹನ..!!

84
0

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿಯಾದ ಪರಿಣಾಮ 20ಕ್ಕಿಂತ ಹೆಚ್ಚು ಜನರು ಸಾವಿಗೀಡಾದ ದುರಂತ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೇಕೂರು ಗ್ರಾಮದಲ್ಲಿ ಶುಕ್ರವಾರ (ಅ.24) ಬೆಳಗಿನ ಜಾವ ನಡೆದಿದೆ.

ನಿನ್ನೆ (ಗುರುವಾರ) ರಾತ್ರಿ 10.30ರ ಸುಮಾರಿಗೆ ಹೈದರಾಬಾದ್‌ನಿಂದ ಹೊರಟಿದ್ದ ಕಾವೇರಿ ಟ್ರಾವೆಲ್ಸ್‌ನ ಬಸ್‌ಗೆ ರಾಷ್ಟ್ರೀಯ ಹೆದ್ದಾರಿ 44ರ ಚಿನ್ನಟೇಕೂರು ಬಳಿ ಬೆಳಗಿನ ಜಾವ 3.30ರ ಸುಮಾರಿಗೆ ಹಿಂಬದಿಯಿಂದ ಬೈಕೊಂದು ಡಿಕ್ಕಿ ಹೊಡೆದಿದೆ. ಬಳಿಕ ಬೈಕ್ ಬಸ್‌ನ ಅಡಿಗೆ ಹೋಗಿ ಇಂಧನ ಟ್ಯಾಂಕ್‌ಗೆ ಬಡಿದಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬಸ್‌ಗೆ ಆವರಿಸಿದೆ.

ದುರಂತ ಸಂಭವಿಸಿದಾಗ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.ಬೈಕ್‌ ಡಿಕ್ಕಿಯಾಗಿ ಬಸ್‌ನ ಅಡಿ ಭಾಗದಲ್ಲಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸದ ಚಾಲಕ ಸ್ವಲ್ಪ ದೂರು ಬೈಕ್‌ ಅನ್ನು ಎಳೆದುಕೊಂಡು ಬಂದಿದ್ದಾರೆ. ಈ ವೇಳೆ ಡಾಂಬರು ರಸ್ತೆಗೆ ಬೈಕ್ ಒರೆಸಿ ಬೆಂಕಿ ಕಿಡಿ ಬಂದಿದೆ ಎಂದು ಇನ್ನೂ ಕೆಲ ವರದಿಗಳು ಹೇಳಿವೆ.

ತುರ್ತು ನಿರ್ಗಮನ ದ್ವಾರ ಮತ್ತು ಕಿಟಕಿ ಗಾಜುಗಳನ್ನು ಒಡೆದು 12 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂಬ ಮಾಹಿತಿಯು ಇದೆ.ಅವಘಡದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳದಲ್ಲಿ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ. ಅಪಘಾತದ ನಂತರ ಚಾಲಕ ಸೇರಿದಂತೆ ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t