ಮನೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡೊಳ್ಳು ಕಲಾವಿದ ಟಾಕಪ್ಪ ಕಣ್ಣೂರು…!!

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡೊಳ್ಳು ಕಲಾವಿದ ಟಾಕಪ್ಪ ಕಣ್ಣೂರು…!!

165
0

ಆನಂದಪುರ: 2025 26 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರವು ಪ್ರಕಟಿಸಿದ್ದು .ಈ ಬಾರಿ ಜಾನಪದ ಕ್ಷೇತ್ರದಲ್ಲಿ ಸಾಗರ ತಾಲೂಕಿನ ಡೊಳ್ಳು ಕಲಾವಿದ ಬಿ.ಟಾಕಪ್ಪ ಕಣ್ಣೂರು ಇವರಿಗೆ ಸಂದಿದೆ.

ಕಳೆದ ಹಲವಾರು ದಶಕಗಳಿಂದ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡಿದ್ದು ಅದರಲ್ಲೂ ವಿಶೇಷವಾಗಿ ಜಾನಪದ ಡೊಳ್ಳು ಕಲೆಯನ್ನು ಜಗತ್ತಿನ ಉದ್ಘಲಕ್ಕೂ ಪಸರಿಸಿದ ಕೀರ್ತಿ ಬಿ ಟಾಕಪ್ಪನವರಿಗೆ ಸಲ್ಲುತ್ತದೆ.

ಸಾಗರ ತಾಲೂಕಿನ ಆನಂದಪುರ ಹೋಬಳಿಯ ಕಣ್ಣೂರು ಗ್ರಾಮದ ಭರ್ಮಪ್ಪ ಮತ್ತು ಚೌಡಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಪದವಿ ಶಿಕ್ಷಣವನ್ನು ಪೂರೈಸಿ ಸಾಂಸ್ಕೃತಿಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವನವನ್ನು ಜಾನಪದ ಕಲೆ ಬೆಳೆಸುವಲ್ಲಿ ನಿರಂತರ ಪರಿಶ್ರಮವನ್ನು ಹಾಕುತ್ತಾ ಬಂದಿದ್ದಾರೆ ಶಾಲಾ ಕಾಲೇಜು ಸಂದರ್ಭದಲ್ಲಿಯೇ ಕಲಾಸಕ್ತಿಯನ್ನು ಹೊಂದಿದ ಶ್ರೀಯುತರು ಡೊಳ್ಳು ಕಲೆಯನ್ನು ತಮ್ಮ ಆಸಕ್ತಿ ಕ್ಷೇತ್ರವನ್ನಾಗಿಸಿಕೊಂಡು ಈ ಬಗ್ಗೆ ಸಾಕಷ್ಟು ಕಾರ್ಯವನ್ನು ನಿರ್ವಹಿಸಿದ್ದಾರೆ.

ಇವರು ಡೊಳ್ಳು ಕಲೆಯನ್ನು ಜಗತ್ತಿನ ರಷ್ಯಾ, ಇಂಗ್ಲೆಂಡ್, ಅಮೆರಿಕಾ, ಬಾಂಗ್ಲಾ ಶ್ರೀಲಂಕಾ, ಸ್ಕಾಟ್ಲ್ಯಾಂಡ್ ಅಂಡಮಾನ್ ಮತ್ತು ನಿಕೋಬಾರ್ ಮೊದಲಾದ ದೇಶಗಳಲ್ಲಿ ಡೊಳ್ಳು ಕಲೆಯನ್ನು ಪ್ರದರ್ಶನ ಮಾಡಿ ಜನಜನಿತರಾಗಿದ್ದಾರೆ ಅಷ್ಟೇ ಅಲ್ಲದೆ ವಿಶೇಷವಾಗಿ ಜಾನಪದ ಕಲಾವಿದರಾಗಿ ಗುರುತಿಸಿಕೊಂಡು ಅನೇಕ ಕಲಾವಿದರಿಗೆ ತರಬೇತಿಯನ್ನು ರಾಜ್ಯದ ಉದ್ದಗಲಕ್ಕೂ ನೀಡಿದ್ದಾರೆ ಹಾಗೂ ಹಲವಾರು ಜಾನಪದ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದು ಇವರ ಆಸಕ್ತಿಯನ್ನು ಹೆಚ್ಚಿಸಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಸಂದರ್ಭದಲ್ಲಿ ಅನೇಕ ವೈಶಿಷ್ಟ್ಯ ಪೂರ್ಣ ಜಾನಪದ ಕಾರ್ಯಕ್ರಮಗಳನ್ನು ನಾಡಿನ ಉದ್ದಗಲಕ್ಕು ಸಂಘಟಿಸಿ ಜನಸಾಮಾನ್ಯರಲ್ಲಿ ಜಾನಪದ ಕಲೆಯ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದವರಾಗಿದ್ದಾರೆ. ಇವರು ಸ್ಥಳೀಯದಿಂದ ರಾಜ್ಯ ಹಾಗೂ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜಾನಪದ ಕಲೆಯನ್ನು ಬೆಳೆಸುವಲ್ಲಿ ವಿಶೇಷವಾದ ಪಾತ್ರ ಇವರದಾಗಿದೆ, ಇವರು ಅಧ್ಯಕ್ಷರಾದ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು ಆ ಮೂಲಕ ಗ್ರಾಮೀಣ ಜಾನಪದ ಕಲೆಯನ್ನು ಬೆಳೆಸುವಲ್ಲಿ ಇವರ ಪರಿಶ್ರಮ ಸಾಕಷ್ಟಿದೆ.

ಕಣ್ಣೇಶ್ವರ ಜಾನಪದ ಕಲಾತಂಡವನ್ನು ಕಟ್ಟುವ ಮೂಲಕ ಅನೇಕ ಕಲಾವಿದರನ್ನು ಈ ಮೂಲಕ ಬೆಳೆಸಿದ್ದು ವಿಶೇಷವಾಗಿದೆ.ಸದಾ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಬಿ ಟಾಕಪ್ಪ ಕಣ್ಣೂರು ಅವರು ತಮ್ಮ ಕೃಷಿ ಬದುಕಿನೊಂದಿಗೆ ಜಾನಪದ ಕಲೆಯನ್ನು ಜೀವಾಳವಾಗಿಸಿಕೊಂಡು ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದ ಉದ್ದಗಲಕ್ಕೂ ತಮ್ಮ ಕಾರ್ಯವನ್ನು ವಿಸ್ತರಿಸಿಕೊಂಡಿದ್ದು ಜಾನಪದ ಕ್ಷೇತ್ರದಲ್ಲಿ ಎಲ್ಲಾ ಕಲಾವಿದರ ಮನೆ ಮಾತಾಗಿದ್ದಾರೆ ಇಂತಹ ಅಪರೂಪದ ಡೊಳ್ಳು ಕಲಾವಿದ ಬಿ ಟಾಕಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಾಗರ ತಾಲೂಕಿಗೆ ಹೆಗ್ಗಳಿಕೆಯನ್ನು ತಂದಿದೆ.

ಖುಷಿಯ ಸಂಗತಿ ಹಂಚಿಕೊಂಡ ಟಾಕಪ್ಪ:

ನನ್ನ 40 ವರ್ಷದ ಪರಿಶ್ರಮದ ಸೇವೆಗೆ ಸರ್ಕಾರ ನನ್ನನ್ನು ಗುರುತಿಸಿ ನನಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ನನ್ನ ಸಾರ್ಥಕ ಸೇವೆಗೆ ಸಿಕ್ಕ ಫಲ ಎಂದು ಹೇಳಿಕೊಳ್ಳಲು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಬಿ. ಟಾಕಪ್ಪ ಕಣ್ಣೂರು ರವರು ತಿಳಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t