ಮನೆ ರಾಜ್ಯ 🔥🌿 ಅರಣ್ಯ ರಕ್ಷಣೆಗೆ ಸಿಬ್ಬಂದಿ ಕೊರತೆ ಮಾರಕ: ವಿಧಾನ ಪರಿಷತ್‌ನಲ್ಲಿ ಡಾ. ಧನಂಜಯ ಸರ್ಜಿ ದ್ವನಿ..!!

🔥🌿 ಅರಣ್ಯ ರಕ್ಷಣೆಗೆ ಸಿಬ್ಬಂದಿ ಕೊರತೆ ಮಾರಕ: ವಿಧಾನ ಪರಿಷತ್‌ನಲ್ಲಿ ಡಾ. ಧನಂಜಯ ಸರ್ಜಿ ದ್ವನಿ..!!

37
0

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಕಾಡ್ಗಿಚ್ಚಿನ ಆತಂಕವೂ ಗಂಭೀರವಾಗಿದ್ದು, ಚಾರ್ಮುಡಿ, ಕುದುರೆಮುಖ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡಗಳು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ.


ಕಾಡ್ಗಿಚ್ಚನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದ ಅರಣ್ಯ ಇಲಾಖೆಯಲ್ಲಿಯೇ ಸಾವಿರಾರು ಹುದ್ದೆಗಳು ಖಾಲಿ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಕಳವಳ ವ್ಯಕ್ತಪಡಿಸಿದರು.


ಕಾಡ್ಗಿಚ್ಚಿನಿಂದ ಅಮೂಲ್ಯ ಔಷಧೀಯ ಸಸ್ಯಗಳು ಹಾಗೂ ಅಳಿವಿನಂಚಿನಲ್ಲಿರುವ ಜೀವವೈವಿಧ್ಯಗಳು ನಾಶವಾಗುತ್ತಿದ್ದು, ಇದು ಅರಣ್ಯ ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂದಿನ ಆಧುನಿಕ ಯುಗದಲ್ಲೂ ಇಂತಹ ವಿಪತ್ತುಗಳನ್ನು ಸಮರ್ಥವಾಗಿ ತಡೆಯಲು ಸಾಧ್ಯವಾಗದಿರುವುದು ನಾಗರಿಕ ಸಮಾಜಕ್ಕೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.


ಪ್ರಸ್ತುತ ರಾಜ್ಯದಲ್ಲಿ 591 ಡಿ.ಆರ್.ಎಫ್.ಒಗಳು, 2,621 ಫಾರೆಸ್ಟ್ ಗಾರ್ಡ್‌ಗಳು ಹಾಗೂ 1,707 ಫಾರೆಸ್ಟ್ ವಾಚರ್ಸ್‌ಗಳು ಸೇರಿದಂತೆ ಒಟ್ಟು ಸಾವಿರಾರು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಅರಣ್ಯ ರಕ್ಷಣಾ ಕಾರ್ಯಗಳು ಸಮರ್ಪಕವಾಗಿ ನಡೆಯಲು ಅಸಾಧ್ಯವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.


ಈ ಹಿನ್ನೆಲೆಯಲ್ಲಿ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ಜೊತೆಗೆ ಕಾಡ್ಗಿಚ್ಚು ತಡೆಗೆ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಹಾಗೂ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಡಾ. ಧನಂಜಯ ಸರ್ಜಿ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ