ಸಾಗರ, ಜುಲೈ 24: ಆನಂದಪುರ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದ ಸರ್ವೇ ನಂ. 117ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲು ನಡೆಸಿದ್ದ ಪ್ರಯತ್ನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಯಡೇಹಳ್ಳಿ ಗ್ರಾಮದ ನಿವಾಸಿ ಕುಂಟೇಗೌಡ ಅವರು ಸರ್ಕಾರಿ ಜಾಗದಲ್ಲಿ ಸೋಲಾರ್ ತಂತಿಯಿಂದ ಬೇಲಿ ನಿರ್ಮಿಸಿ, ದೊಡ್ಡ ಬಾಳೆ ಗಿಡಗಳನ್ನು ನೆಟ್ಟು ಒತ್ತುವರಿ ಮಾಡಲು ಪ್ರಯತ್ನಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ನಿರ್ಮಿಸಿದ್ದ ಬೇಲಿ ಹಾಗೂ ನೆಟ್ಟಿದ್ದ ಗಿಡಗಳನ್ನು ತೆರವು ಗೊಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಗೀತಾ ಅವರ ಆದೇಶದ ಮೇರೆಗೆ ಆನಂದಪುರ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚೇತನ್, ಗೌತಮಪುರ ಶಾಖೆಯ ಚಂದ್ರಶೇಖರ್, ಬೀಟ್ ಫಾರೆಸ್ಟರ್‌ಗಳಾದ ಪ್ರದೀಶ್, ವಿನಯ್, ಸೈಯದ್ ಹಾಗೂ ಸಿಬ್ಬಂದಿಗಳಾದ ಸತ್ಯನಾರಾಯಣ, ಭೋಜಪ್ಪ, ಪ್ರವೀಣ ಮತ್ತು ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಾಹೀರಾತು












