Home Shivamogga ಶಿಕ್ಷಕರನ್ನು ಗೌರವಿಸುವುದು ಸಮಾಜದ ಕರ್ತವ್ಯ: ಹನುಮಂತಪ್ಪ ಗುರೂಜಿ..!!

ಶಿಕ್ಷಕರನ್ನು ಗೌರವಿಸುವುದು ಸಮಾಜದ ಕರ್ತವ್ಯ: ಹನುಮಂತಪ್ಪ ಗುರೂಜಿ..!!

16
0

ಶಿಕಾರಿಪುರ: ಶಿಕ್ಷಕರು ತಮ್ಮ ಜ್ಞಾನ, ಅನುಭವ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜದ ಭವಿಷ್ಯವನ್ನುj ನಿರ್ಮಿಸುವ ಶಕ್ತಿ ಹೊಂದಿದ್ದಾರೆ. ಜಗತ್ತನ್ನು ಬದಲಾಯಿಸುವ ಶಕ್ತಿ ಶಿಕ್ಷಕರಿಗಿದ್ದು, ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಶಿವಳ್ಳಿ ಶ್ರೀ ವರದಾಂಜನೇಯ ಸ್ವಾಮಿ ಪ್ರಧಾನ ಅರ್ಚಕರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಹನುಮಂತಪ್ಪ ಗುರೂಜಿ ಹೇಳಿದರು.

ಹತ್ತಿರದ ಶಿವಳ್ಳಿ ಗ್ರಾಮದಲ್ಲಿ ಶಿಕ್ಷಕರ ಜಯಂತಿ ಪ್ರಯುಕ್ತ ಹನುಮದಾಶ್ರಮ ಮತ್ತು ವಿದ್ಯಾರಂಭ ಗುರುಕುಲ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುವವರಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಮಾನವೀಯತೆ, ದೇಶಪ್ರೇಮ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ನಿಸ್ವಾರ್ಥ ಸೇವೆ ಹಾಗೂ ತ್ಯಾಗವನ್ನು ಸಮಾಜ ಸದಾ ಗೌರವಿಸಬೇಕು ಎಂದರು.

ವಿದ್ಯಾರಂಭ ಗುರುಕುಲದ ಶ್ರೀ ಮಂಜುನಾಥ್ ಗುರುದೇವ್ ಮಾತನಾಡಿ, ಭಾರತೀಯ ಪುರಾತನ ಪರಂಪರೆ ಹಾಗೂ ಶಿಕ್ಷಣ ಪದ್ಧತಿಯಲ್ಲಿ ಅಪಾರವಾದ ಜ್ಞಾನ ಮತ್ತು ಜೀವನ ಮೌಲ್ಯಗಳು ಅಡಗಿವೆ. ಆದರೆ ಆ ಪರಂಪರೆಯ ಮಹತ್ವವನ್ನು ಅರಿತುಕೊಳ್ಳುವಲ್ಲಿ ಇಂದಿನ ಪೀಳಿಗೆ ಹಿಂದೆ ಬಿದ್ದಿದೆ. ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರಂಭ ಗುರುಕುಲವು ಭಾರತೀಯ ಸಾಂಪ್ರದಾಯಿಕ ಶಿಕ್ಷಣವನ್ನು ಇಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಕಾಸರಗುಪ್ಪಿ ಅಜ್ಜಪ್ಪ ಮಾತನಾಡಿ, ಶಿವಳ್ಳಿ ಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ಆಶ್ರಮದಲ್ಲಿ ಗೋವುಗಳ ಸಂರಕ್ಷಣೆ ಹಾಗೂ ಪ್ರಾಚೀನ ಶಿಕ್ಷಣ ಪದ್ಧತಿಯ ಪರಿಚಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಾರುತಪ್ಪ, ತೋಟಪ್ಪ, ತೋಪಮ್ಮ, ಸಿದ್ದರಾಮೇಶ್ವರ ಸಮಿತಿ ಕಾರ್ಯದರ್ಶಿ ಹನುಮಂತಪ್ಪ ಬಿಳವಾಣೇರ್, ನಿವೃತ್ತ ಶಿಕ್ಷಕ ಭರಮಗೌಡ, ಮುಖ್ಯ ಶಿಕ್ಷಕರಾದ ಜಾವಗಟ್ಟಿ ಹನುಮಂತಪ್ಪ, ಶೇಖರ್ ನಾಯ್ಕ, ರವಿ ಹಾಗೂ ಕೀರ್ತಿಶ್, ನಾಗರಾಜ್, ಯಶೋಧಮ್ಮ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಬೂದ್ಯಪ್ಪ ಸೇರಿದಂತೆ ನೂರಾರು ಶಿಕ್ಷಕರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.