✒️…ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 21 ಕೆಜಿ ಜಿಂಕೆ ಮಾಂಸವನ್ನು ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ನೇತೃತ್ವದ ತಂಡ ವಶಪಡಿಸಿಕೊಂಡಿದೆ.
ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಯೂರ್ ಅವರ ಮಾರ್ಗದರ್ಶನದಲ್ಲಿ, ಅರಣ್ಯ ಸಂಚಾರಿದಳದ ಪಿಎಸ್‌ಐ ವಿನಾಯಕ್ ನೇತೃತ್ವದ ತಂಡ ಶನಿವಾರ ಹೊಸನಗರದ ರಿಪ್ಪನಪೇಟೆ ಸಮೀಪದ ಬರುವೆ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಕಾರಿನಲ್ಲಿ ಅಕ್ರಮವಾಗಿ ಕಾಡುಜಿಂಕೆಯ ಮಾಂಸ ಸಾಗಿಸುತ್ತಿರುವುದು ಪತ್ತೆಯಾಗಿದ್ದು, 21 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಬರುವೆ ಮೂಲದ ಗುರುರಾಜ್ ತಂದೆ ನರಸಿಂಹ ನಾಯಕ್ ಹಾಗೂ ಕರಡಿಗ ನಿವಾಸಿ ಗಣೇಶ್ ತಂದೆ ಗೋಪಾಲ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪಿಎಸ್‌ಐ ವಿನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಕಾರ್ಯಾಚರಣೆಯಲ್ಲಿ ಗಣೇಶ್, ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಮನಿ ಪಾಲ್ಗೊಂಡಿದ್ದರು.
ಜಾಹೀರಾತು












